ಸೇಡಂ; ಹಬ್ಬ, ಉತ್ಸವ ಸೌಹಾರ್ದಯುತವಾಗಿ ಆಚರಿಸಿ

PH 05
Published on

ಸೇಡಂ: ಪರಸ್ಪರ ಸಹಕಾರ ಮನೋಭಾವದಿಂದ ಹಬ್ಬಗಳನ್ನು ಆಚರಿಸಿದಾಗ ಮಾತ್ರ ಸೌಹರ್ದಯುತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಡಿವೈಎಸ್‌ಪಿ ಕೆ.ಬಸವರಾಜ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ಗಣೇಶೋತ್ಸವ ಮತ್ತು ಈದ್‌ಮಿಲಾದ್ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸೇಡಂನಲ್ಲಿ ಇದುವರೆಗೂ ಶಾಂತಿಗೆ ಭಂಗ ತರುವಂಥ ಕೆಲಸ ಯಾರು ಮಾಡಿಲ್ಲ. ಮುಂದಿನ ದಿನಗಳಲ್ಲೂ ಇದೇ ರೀತಿ ಸೌಹಾರ್ದಯುತ ಜೀವನ ನಡೆಸಬೇಕಿದೆ. ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸೋಣ ಎಂದರು.

ಗಣೇಶ ಮಂಡಳಿ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಜೂಜು ಸೇರಿ ಇನ್ನಿತರ ಅನಧಿಕೃತ ಚಟುವಟಿಕೆ ನಡೆಸಬಾರದು. ದಿನದ 24 ಗಂಟೆಯೂ ಕಾವಲಿರಬೇಕು. ಸಂಬAಧಿಸಿದ ಇಲಾಖೆಗಳ ಅನುಮತಿ ಪಡೆಯಬೇಕು. ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಸೌಂಡ್ ಸಿಸ್ಟಮ್ ಅಳವಡಿಸಬಾರದು. ವಿದ್ಯುತ್ ವೈರ್ ಹಾಕುವಾಗ ಜಾಗೃತಿವಹಿಸಬೇಕು ಎಂದು ಸೂಚನೆ ನೀಡಿದರು.

ತಹಸೀಲ್ದಾರ್ ಶ್ರೀಯಾಂಕ್ ಧನಶ್ರೀ ಮಾತನಾಡಿ, ನಾವು ಆಚರಿಸುವ ಹಬ್ಬಗಳು ಇನ್ನೊಬ್ಬರಿಗೆ ನೋವುಂಟು ಮಾಡಬಾರದು. ಸರ್ವಧರ್ಮ ಒಂದೇ ಎನ್ನುವ ಭಾವದೊಂದಿಗೆ ಹಬ್ಬಗಳು ಆಚರಿಸಿದಾಗ ಸುಂದರ ಸಮಾಜ ನಿರ್ಮಾಣವಾಗಲಿದೆ. ತಾಲೂಕು ಆಡಳಿತ ಗಣೇಶೋತ್ಸವಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಿದೆ ಎಂದು ತಿಳಿಸಿದರು.

ಪಿಎಸ್‌ಐ ಮಂಜುನಾಥರೆಡ್ಡಿ, ಪರಿಸರ ಮಂಡಳಿಯ ಶಾರದಾ, ಪುರಸಭೆ ಮುಖ್ಯಾಧಿಕಾರಿ ಪ್ರಹ್ಲಾದ್, ಜೆಸ್ಕಾಂನ ಕಾಮಣ್ಣ, ಆರೋಗ್ಯ ಇಲಾಲೆಯ ಡಾ.ಸದಾನಂದರೆಡ್ಡಿ, ವಿಶ್ವ ಹಿಂದು ಪರಿಷತ್‌ನ ಶಿವಕುಮಾರ ಬೋಳಶೆಟ್ಟಿ, ಮುಖಂಡರಾದ ಸಾಜೀದ್‌ಖಾನ್, ಆದಾಮ್, ತನಿಖಾ ವಿಭಾಗದ ಪಿಎಸ್‌ಐ ಅರ್ಜುನಪ್ಪ, ಅಗ್ನಿಶಾಮಕದಳದ ಶಕೀಲ್, ತಾಪಂ ಅಧಿಕಾರಿ ರವೀಂದ್ರ, ಪೊಲೀಸ್ ಸಿಬ್ಬಂದಿ ಬಾಬುರಾವ, ನಾಗರಾಜ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net