

ಸೇಡಂ: ವಿಜ್ಞಾನ, ತಂತ್ರಜ್ಞಾನ ಸೇರಿ ಬಹುತೇಕ ಕ್ಷೇತ್ರಗಳಲ್ಲಿ ಭಾರತ ಮುಂದಿದೆ. ಆದರೆ ಇಂದಿನ ಯುವ ಜನರಲ್ಲಿ ಆತ್ಮವಿಶ್ವಾಸ ಕ್ಷೀಣಿಸುತ್ತಿರುವುದು ದುರಂತದ ಸಂಗತಿ ಎಂದು ಮಂಗಳೂರಿನ ಸಜ್ಜನ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಗೊನಡ್ಕ ಕಳವಳ ವ್ಯಕ್ತಪಡಿಸಿದರು.
ಸುವರ್ಣ ಕರ್ನಾಟಕ ಭವನದಲ್ಲಿ ಸ್ವಾಮಿ ವಿವೇಕಾನಂದ ಕಲಾ ಪದವಿ ಮತ್ತು ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯ ಹಾಗೂ ಬೀಜದಕಟ್ಟೆಯ ಸಜ್ಜನ ಪ್ರತಿಷ್ಠಾನದಿಂದ ಶನಿವಾರ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕುರಿತ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿದೆಸೆಯಲ್ಲಿ ಸ್ವಲ್ಪ ಎಡವಿದರೂ ಜೀವನವೇ ಮುಳುಗಿ ಹೋಗುತ್ತದೆ ಎನ್ನುವ ಸ್ಥಿತಿಗೆ ವಿದ್ಯಾರ್ಥಿಗಳು ಬಂದಿದ್ದಾರೆ. ನಾವು ಏನಾದರೂ ಸಾಧನೆ ಮಾಡುತ್ತೇವೆ ಎಂಬ ನಂಬಿಕೆ ಮಕ್ಕಳಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕ ಡಾ.ರಾಜಶೇಖರ ಕಟ್ಟಿಮನಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಸ್ಪರ್ಧೆ ಹೆಚ್ಚಾಗುತ್ತದೆ. ಉದ್ಯೋಗಾವಕಾಶ ಸಿಗದೆ ಅನೇಕರು ಯುವಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಓದಿಗೆ ತಕ್ಕ ಕೆಲಸ ಸಿಗದೆ ಕೆಲವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಮಾಜಕಾರ್ಯವೂ ವೃತ್ತಿಪರ ಶಿಕ್ಷಣವಾಗಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶ ದೊರೆಯಲಿವೆ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಸವರಾಜ ಕೊನೇರಿ ಮಾತನಾಡಿದರು. ಆಶ್ರಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬೆಡಸೂರ, ಪ್ರಮುಖರಾದ ಓಂಪ್ರಕಾಶ ಪಾಟೀಲ್, ಮಹೇಶ ಧರಿ, ಬಾಬುರಾವ, ಶಿವರಾಜ ಇತರರಿದ್ದರು. ಲಲಿತಾ, ಜ್ಯೋತಿ ಪ್ರಾರ್ಥಿಸಿದರು. ಸಂದೀಪ್ ಪ್ಯಾಟಿ ಸ್ವಾಗತಿಸಿದರು. ರೇವಣಸಿದ್ದಪ್ಪ ಪಾಟೀಲ್ ನಿರೂಪಣೆ ಮಾಡಿದರು.