ಸೇಡಂ; ಕಸಾಪದಿಂದ ಗೀತ ಗಾಯನ ಸ್ಪರ್ಧೆ

PH 08
Published on

ಸೇಡಂ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿದಾಗಲೇ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಬಸವಲಿಂಗಮ್ಮ ಪಾಟೀಲ್ ಅಭಿಪ್ರಾಯಪಟ್ಟರು.

ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಆಯೋಜಿಸಿದ್ದ ಗೀತ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಸ್ಪರ್ಧೆಯಿದೆ. ಹೀಗಾಗಿ ಮಕ್ಕಳು ಇಂದಿನಿಂದಲೇ ಅಪ್‌ಡೇಟ್ ಆಗಬೇಕು. ಹೊಸ-ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಸ್ಪರ್ಧೆಯಲ್ಲಿದ್ದಾಗ ಗೆಲುವು ನಮ್ಮದಾಗಿಸಿಕೊಳ್ಳಲು ಕ್ಷಮತೆ, ತಾಳ್ಮೆ ಇರಬೇಕು ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪರಿಷತ್‌ನಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಗಡಿ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಚಟುವಟಿಕೆ ಆಯೋಜಿಸಲಾಗುತ್ತಿದೆ ಎಂದರು.

ಮುಖ್ಯಶಿಕ್ಷಕ ಚಂದ್ರಕಾಂತ ಕೆಂಚೆ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಬಸಮ್ಮ ಪಾಟೀಲ್, ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ರಾಚಣ್ಣ ಬಳಗಾರ, ಪ್ರಮುಖರಾದ ಲಲಿತಾ ಕೋಕಟ್, ಚಂದ್ರಶೇಖರ ಪವಾರ, ಮಲ್ಲಿಕಾರ್ಜುನ ಮೊಟಗಿ ಇತರರಿದ್ದರು. ವಿದ್ಯಾರ್ಥಿಗಳಾದ ನಿಶಾ, ಅಕ್ಷತಾ ಪ್ರಾರ್ಥಿಸಿದರು. ಶಿಕ್ಷಕ ರಾಜು ಸ್ವಾಗತಿಸಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net