ಸೇಡಂ; ಕಲಾ ಜಗತ್ತು ವಿಸ್ತಾರಕ್ಕೆ ಸಂಸ್ಥೆಗಳ ಸಹಕಾರ ಅಗತ್ಯ

PH 09
Published on

ಸೇಡಂ: ಆಧುನಿಕ ಯುಗದಲ್ಲಿ ಕಲಾ ಜಗತ್ತು ವಿಸ್ತಾರಗೊಳ್ಳಬೇಕಾದರೆ ಅದರದ್ದೆ ಕಲ್ಪನೆಯುಳ್ಳ ಸಂಸ್ಥೆಗಳು ಹುಟ್ಟಿಕೊಳ್ಳುವುದು ಅವಶ್ಯ ಎಂದು ಕಲಬುರಗಿಯ ಜಾನೆ ಆರ್ಟ್ ಗ್ಯಾಲರಿ ಅಧ್ಯಕ್ಷ ಬಸವರಾಜ ಜಾನೆ ಅಭಿಪ್ರಾಯಪಟ್ಟರು.

ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವಿಸ್ಮಯ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಉದ್ಘಾಟನೆ, ಕಲಾ ಶಿಬಿರ, ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಸಮೂಹ ಕಲೆಗಳನ್ನು ಬಿಟ್ಟು, ಕೇವಲ ಮೊಬೈಲ್ ಜಗತ್ತಿನಲ್ಲಿ ಕಾಲಹರಣ ಮಾಡುತ್ತಿದೆ. ವೃತ್ತಿ ಆಧಾರಿತ ಬದುಕು ಕಟ್ಟಿಕೊಳ್ಳಲು ಜಾಗೃತಿ ಮೂಡಿಸುವ ಸಂಸ್ಥೆಗಳು ಬೇಕಿದೆ ಎಂದರು.

ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಸಾಂಸ್ಕೃತಿಕ ವಾತಾವರಣ ಕಲಾವಿದರಿಗೆ ಪ್ರೇರಣೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಸಾಕಷ್ಟು ಕಲಾವಿದರು ಬಂದಿದ್ದು, ಅವರೆಲ್ಲರೂ ತಮ್ಮ ಕಲೆಯ ಪ್ರದರ್ಶನ ನಡೆಸಲಿದ್ದಾರೆ. ಸ್ಥಳೀಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮ ಸಾಹಿತ್ಯ ವೇದಿಕೆ ಸಂಚಾಲಕ ಲಿಂಗಾರಡ್ಡಿ ಶೇರಿ, ಸಂಸ್ಥೆಯ ಅಧ್ಯಕ್ಷ ಸಿದ್ಧೆಶ್ವರ ಕುಂಬಾರ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕೊಪ್ಪದ ಮಾತನಾಡಿದರು. ಪ್ರಮುಖರಾದ ಬಸವತೀರ್ಥಪ್ಪ ಕಾಚೂರ, ಪ್ರಶಾಂತ ಕುಂಬಾರ ಇತರರಿದ್ದರು. ಗೌರಿಶಂಕರ ಪ್ರಾರ್ಥಿಸಿದರು. ಸವಿತಾ ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಗೊಣಗಿ ನಿರೂಪಣೆ ಮಾಡಿದರು. ದೌಲತ್‌ರಾಯ ದೇಸಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net