ಸೇಡಂ; ಅಗತ್ಯ ಸಾಮಗ್ರಿಗಳ ಬೇಡಿಕೆ ಪಟ್ಟಿ ಸಲ್ಲಿಸಿ- ಡಾ.ಶರಣಪ್ರಕಾಶ

PH 10
Published on

ಸೇಡಂ: ಸರ್ಕಾರ ಸಾಕಷ್ಟು ಅನುದಾನ ನೀಡಿ ಆಡಳಿತ ಸೌಧ ನಿರ್ಮಾಣ ಮಾಡಿದ್ದು, ತ್ವರಿತಗತಿಯಲ್ಲಿ ಎಲ್ಲ ಕಚೇರಿಗಳನ್ನು ಸ್ಥಳಾಂತರ ಮಾಡಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೂಚನೆ ನೀಡಿದರು.

ನೂತನ ತಾಲೂಕು ಆಡಳಿತ ಸೌಧಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕಟ್ಟಡ ಉದ್ಘಾಟನೆಯಾದರೂ ಕಚೇರಿಗಳು ಯಾಕೆ ಸ್ಥಳಾಂತರಗೊಂಡಿಲ್ಲ ಎಂದು ಪ್ರಶ್ನಿಸಿದರು. ತಹಸಿಲ್ ಸೇರಿ ಹಲವು ತಾಲೂಕು ಮಟ್ಟದ ಕಚೇರಿಗಳಿಗಾಗಿ ಆಡಳಿತ ಸೌಧ ನಿರ್ಮಿಸಲಾಗಿದೆ. ಕೇವಲ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗೆ ಟೇಬಲ್, ಕುರ್ಚಿ ಇತರ ಸಲಕರಣೆಗಳು ಬೇಕು. ಆದರೆ ಇದ್ಯಾವುದಕ್ಕೂ ಅನುದಾನ ಮೀಸಲಿಡದ್ದರಿಂದ ಸಮಸ್ಯೆ ಆಗಿದೆ ಎಂದು ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಮಾಹಿತಿ ನೀಡಿದರು.

ಕೂಡಲೆ ಅಗತ್ಯವಿರುವ ಸಾಮಗ್ರಿಗಳ ಪಟ್ಟಿ ತಯಾರಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ನಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಅನುದಾನ ಒದಗಿಸಿಕೊಡುವೆ ಎಂದು ಭರವಸೆ ನೀಡಿದರು. ಗ್ರೇಡ್-2 ತಹಸೀಲ್ದಾರ್ ಸಿದ್ರಾಮ ನಾಚವಾರ, ಎಸಿ ಕಚೇರಿ ತಹಸೀಲ್ದಾರ್ ನಾಗನಾಥ ತರಗೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯ ಸ್ವಾಮಿ ಇಮಡಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net