

ಶನಿವಾರಸಂತೆ: ಗಾಳಿ ಮಳೆಗೆ ವಿದ್ಯುತ್ ಕಂಬಗಳು ಬೀಳುವುದು ಕೊಡಗಿನಲ್ಲಿ ಸರ್ವೇಸಾಮಾನ್ಯ. ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಆಲೂರು ಸಿದ್ದಾಪುರ ಭಾಗದಲ್ಲಿ ಕಳೆದ 17 ದಿನಗಳಲ್ಲಿ ಸುರಿದ ಗಾಳಿ ಮಳೆಗೆ 84 ಕಂಬಗಳು, 5 ಟ್ರಾನ್ಸ್‌ಫಾರ್ಮರ್‌ಗಳು ಮುರಿದು ಬಿದ್ದಿದ್ದವು.
ಪರಿಣಾಮ ನೂರಾರು ಗ್ರಾಮಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದವು. ಸೆಸ್ಕ್ ಸಿಬ್ಬಂದಿ ಹಗಲಿರುಳೆನ್ನದೆ ಕೆಲಸ ನಿರ್ವಹಿಸಿ ಸಮಸ್ಯೆ ಸರಿಪಡಿಸಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ತುರ್ತು ಕಾರ್ಯಾಚರಣೆ ವಾಹನಗಳು ತೆರಳಲು ಸಾಧ್ಯವಾಗದ ಕೆಲ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ವಿದ್ಯುತ್ ಮಾರ್ಗ ದುರಸ್ತಿ ಕಾರ್ಯ ಬಾಕಿ ಇದೆ. ಈಗ ಮಳೆ ಕಡಿಮೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಅವುಗಳನ್ನೂ ಸರಿಪಡಿಸುವುದಾಗಿ ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 17 ದಿನದಲ್ಲಿ ಗಾಳಿ ಮಳೆಗೆ 84 ಕಂಬಗಳು ಮುರಿದಿವೆ. 5 ಟ್ರಾನ್ಸ್‌ಫಾರ್ಮರ್‌ಗಳು ಬಿದ್ದಿವೆ. ಇವುಗಳನೆಲ್ಲ ನಮ್ಮ ಸಿಬ್ಬಂದಿ ಹಗಲು- ರಾತ್ರಿ ಕೆಲಸ ನಿರ್ವಹಿಸಿ ಸರಿಪಡಿಸಿದ್ದಾರೆ. ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸೆಸ್ಕ್ ಉದ್ದೇಶಕ್ಕೆ ಸಿಬ್ಬಂದಿ ಶ್ರಮಿಸಿದ್ದಾರೆ. ಯಾವುದೇ ಸಮಯದಲ್ಲಿ ಗ್ರಾಹಕರು ಸಹಾಯವಾಣಿಗೆ ಕರೆ ಮಾಡಿದರೆ ಸಿಬ್ಬಂದಿ ತುರ್ತಾಗಿ ಸ್ಪಂದಿಸಲು ಅಣಿಯಾಗಿರುತ್ತಾರೆ.
ಜೆ.ಯು. ಸುದೀಪ್ ಕಾರ್ಯನಿರ್ವಾಹಕ ಇಂಜಿನಿಯರ್ ಸೆಸ್ಕ್, ಶನಿವಾರಸಂತೆ
ಆಲೂರು ಸಿದ್ದಾಪುರ ವ್ಯಾಪ್ತಿಯಲ್ಲಿ ಅರಣ್ಯ, ಬೆಟ್ಟ-ಗುಡ್ಡ, ಹೊಲ-ಗದ್ದೆಗಳೇ ಹೆಚ್ಚಾಗಿವೆ. ಇಲ್ಲಿ ತುಂಡಾಗಿ ಬಿದ್ದ ವಿದ್ಯುತ್ ಕಂಬ, ತಂತಿಗಳನ್ನು ಸರಿಪಡಿಸುವುದು ಸವಾಲಿನ ಕೆಲಸ. ಆದರೂ ನಮ್ಮ ಸಿಬ್ಬಂದಿ ತುರ್ತು ಕಾರ್ಯ ನಿರ್ವಹಣೆಗೆ ಮುಂದಾಗಿ ನೂರಾರು ಹಳ್ಳಿಗಳಿಗೆ ಬೆಳಕು ನೀಡಿದ್ದಾರೆ. ಯಾವುದೇ ವಾಹನ ಹೋಗಲಾರದ ಸ್ಥಳಗಳಿಗೆ ಖುದ್ದಾಗಿ ತೆರಳಿ ದುರಸ್ತಿ ಕಾರ್ಯ ನಿರ್ವಹಿಸಿದ್ದಾರೆ. ಯಾವ ಗ್ರಾಮದಲ್ಲೂ ರಾತ್ರಿ ವಿದ್ಯುತ್ ದೀಪಕ್ಕೆ, ಕುಡಿವ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಹೆಚ್ಚುವರಿ ಸಿಬ್ಬಂದಿ ಸಹಾಯ ಪಡೆದು ಸಮಸ್ಯೆಗಳನ್ನು ಸರಿಪಡಿಸಿದ್ದೇವೆ.
ರಮೇಶ್ ಕಿರಿಯ ಇಂಜಿನಿಯರ್, ಸೆಸ್ಕ್, ಆಲೂರು ಸಿದ್ದಾಪುರ