

ಕೊಳ್ಳೇಗಾಲ: ಅಸಮರ್ಪಕ ವಿದ್ಯುತ್, ಲೈನ್‌ಮನ್‌ಗಳ ಸಮಸ್ಯೆ, ಅಕ್ರಮ ವಿದ್ಯುತ್, ಪರಿಹಾರ ವಿಳಂಬ ಇನ್ನಿತರ ವಿಚಾರಗಳ ಬಗ್ಗೆ ರೈತರು ಹಾಗೂ ಸಾರ್ವಜನಿಕರು ದೂರಿನ ಸುರಿಮಳೆಗೈದರು. ಕೊಳ್ಳೇಗಾಲ ಉಪವಿಭಾಗ ಸೆಸ್ಕ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸೆಸ್ಕ್ ಅಧಿಕಾರಿಗಳಿಗೆ ವಿದ್ಯುತ್ ಸಮಸ್ಯೆಗಳ ಸಾರ್ವಜನಿಕರು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಸಿದ್ದಯ್ಯನಪುರದ ನಿವಾಸಿ ರಾಜು ಮಾತನಾಡಿ, ಗ್ರಾಮದಲ್ಲಿ ಬೆಳಗಿನ ಜಾವ ಬೀದಿ ದೀಪಗಳು ಉರಿಯುತ್ತಿದೆ. ಬೇಸಿಗೆ ಕಾಲದಲ್ಲಿ ವಿದ್ಯುತ್ ಉಳಿಸುವ ಕೆಲಸವನ್ನು ಸೆಸ್ಕ್ ಮಾಡಬೇಕು. ವಿದ್ಯುತ್ ಪೋಲಾಗುತ್ತಿದೆ. ಕಚೇರಿಯ ಲಿಫ್ಟ್ ಕೆಟ್ಟು ಹೋಗಿದೆ ಎಂದರು. ಈ ಬಗ್ಗೆ ಕ್ರಮವಹಿಸುವುದಾಗಿ ಸೆಸ್ಕ್ ಕಾರ್ಯನಿರ್ವಾಹಕ ಅಭಿಯಂತರ(ಇಇ) ತಬಸ್ಸು ಅಪ್ಜಾ ಹೇಳಿದರು.
ರೈತ ಮುಖಂಡ ಹಾಗೂ ನಗರಸಭೆ ನಾಮನಿರ್ದೇಶನ ಸದಸ್ಯ ನರಸಿಂಹನ್ ಮಾತನಾಡಿ, ಲ್ಯಾನ್‌ಮ್ಯಾನ್‌ಗಳ ಕೊರತೆಯಿಂದ ಬಹಳ ಸಮಸ್ಯೆ ಉಂಟಾಗಿದೆ. ಬಿಲ್ ಕಲೆಕ್ಷನ್‌ಗಳಿಗೆ ಲ್ಯಾನ್‌ಮ್ಯಾನ್‌ಗಳನ್ನು ಬಳಸುವುದರಿಂದ ಸಾರ್ವಜನಿಕರ ದೂರಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಮಾರ್ಚ್, ಏಪ್ರಿಲ್, ಮೇ ತಿಂಗಳ ಬೇಸಿಗೆ ತಿಂಗಳಲ್ಲಿ ಲ್ಯಾನ್‌ಮ್ಯಾನ್‌ಗಳ ಲಭ್ಯತೆ ಇರಬೇಕು. ರೈತರು ಹಾಗೂ ಸಾರ್ವಜನಿಕರು ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸುವಂತೆ ಆಗಬೇಕು. ಸರ್ಕಾರ ಆದೇಶದಂತೆ 7 ಗಂಟೆಯ ಕಾಲ ವಿದ್ಯುತ್ ನೀಡುತ್ತಿಲ್ಲ. ವ್ಯತ್ಯಾಸ ಮಾಡಲಾಗುತ್ತಿದೆ ರೈತರಿಗೆ ತೊಂದರೆ ಆಗುತ್ತಿದೆ ಎಂದರು.
ಬೇಸಿಗೆಯಲ್ಲಿ ಸರಿಯಾಗಿ ಕೆಲಸ ಮಾಡಿ: ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಸೆಸ್ಕ್ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡಬೇಕು. ಇಲ್ಲವಾದರೆ ರೈತರ ಬೆಳೆಗೆ ನೀರಿಲ್ಲದೆ ಹಾನಿ ಆಗುತ್ತದೆ. 2024 ಫೆ.ತಿಂಗಳಲ್ಲಿ ಮುಳ್ಳೂರಿನ ನಿರಂಜನ್ ಎಂಬುವರ ಕಬ್ಬಿನ ಜಮೀನಿಗೆ ಜೋತು ಬಿದ್ದ ವಿದ್ಯುತ್ ತಂತಿಯಿಂದ ಬೆಂಕಿ ಬಿದ್ದು ನಷ್ಟವಾಯಿತು. ಇಲ್ಲಿಯವರೆವಿಗೂ ಪರಿಹಾರ ದೊರೆತಿಲ್ಲ. 1 ವರ್ಷದ ಬಳಿಕ ಸೆಸ್ಕ್ ಕಚೇರಿಯಲ್ಲಿ ಪರಿಹಾರಕ್ಕೆ ವಿಎ ವರದಿ ನೀಡಿ, ಎಫ್‌ಐಆರ್ ಪ್ರತಿ ನೀಡಿ ಎಂದು ಹೇಳುತ್ತಿದ್ದಾರೆ. ಸಕಾಲಕ್ಕೆ ದಾಖಲೆಗಳನ್ನು ಕೇಳದೆ ಈಗ ಕೇಳುತ್ತಿದ್ದಾರೆ. ಇದ್ದರಿಂದ ಪರಿಹಾರ ಸಿಗದೆ ಸಂಕಷ್ಟಕ್ಕೀಡಾಗಿದ್ದಾನೆ ಎಂದರು.
ರೈತ ಮುಖಂಡ ಜಯರಾಜ್ ಮಾತನಾಡಿ, ಸತ್ತೇಗಾಲ ಬಸ್ ನಿಲ್ದಾಣದಿಂದ ಅಗ್ರಹಾರವರೆಗೆ 21 ಕಂಬಗಳ ಅಳವಿಡಿಕೆ ಕಾಮಗಾರಿಗೆ ವರ್ಕ್ ಆರ್ಡರ್ ಆಗಿದೆ. ಆದರೆ, ಕೆಲಸ ಆರಂಭಗೊಂಡಿಲ್ಲ. ಟಿಸಿಗಳ ಸುತ್ತಲೂ ಬೇಲಿ ಹಬ್ಬಿದೆ. ಅಕ್ರಮ ಮತ್ತು ಸಕ್ರಮದ ಬಗ್ಗೆ ರೈತರಿಗೆ ಗೊಂದಲವಿದೆ. ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದರು. ಈ ಬಗ್ಗೆ ಕ್ರಮವಹಿಸುವುದಾಗಿ ಸೆಸ್ಕ್ ಇಇ ತಿಳಿಸಿದರು.ಕುಂತೂರಿನ ರಾಜಣ್ಣ ಮಾತನಾಡಿ, ಗ್ರಾಮದ ಸಕ್ಕರೆ ಕಾರ್ಖನೆ ವೃತ್ತದಿಂದ ಕೆರೆಯ ಮಗ್ಗಲಿನಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಲೈಟ್‌ಕಂಬಗಳನ್ನು ಅಳವಡಿಸಬೇಕು. ಕೆರೆಯ ಅರಿವಿಲ್ಲದೆ ಅಪಘಾತ ಸಂಭವಿಸುತ್ತಿದೆ. ಇತ್ತೀಚೆಗೆ ಕೆರೆಗೆ ಕಾರು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದರು. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವುದಾಗಿ ಸೆಸ್ಕ್ ಅಧಿಕಾರಿಗಳು ತಿಳಿಸಿದರು.
ಅಕ್ರಮ ವಿದ್ಯುತ್ ಸಂಪರ್ಕ ಬಂದ್ ಆಗಲಿದೆ: ರೈತ ವೆಂಕಟೇಶ್ ಮೂರ್ತಿ ಮಾತನಾಡಿ, ನಮ್ಮ ಪಕ್ಕದ ಜಮೀನಿನವರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಈ ಬಗ್ಗೆ ಹಿಂದೆ ಸೆಸ್ಕ್ ಅಧಿಕಾರಿಗಳಿಗೆ ದೂರಲಾಗಿತ್ತು. ಅದರಂತೆ ಅಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಆದರೆ, ವಿದ್ಯುತ್ ಗುತ್ತಿಗೆದಾರನಿಂದ ಮತ್ತೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಇದ್ದರಿಂದ ನಮಗೆ ತೊಂದರೆಯಾಗಿದೆ ಎಂದು ದೂರಿದರು. ಸೆಸ್ಕ್ ಇಇ ಪ್ರತಿಕ್ರಿಯಿಸಿ ಪರಿಶೀಲಿಸಿ ತಕ್ಷಣವೇ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದರು. ಸಭೆಯಲ್ಲಿ ಸೆಸ್ಕ್ ಎಇಇ ರಾಜು ಹಾಗೂ ಸಿಬ್ಬಂದಿ ಇದ್ದರು.