ಸೆಸ್ಕ್ ಕಚೇರಿ ಮುಂದೆ ರೈತರ ಪ್ರತಿಭಟನೆ

Published on

ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ತೋಟದ ಮನೆಗಳಿಗೆ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಲ್ಲೇಮಾಳ-ಅಜ್ಜೀಪುರ ವಿಭಜಕ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನೆರೆದಿದ್ದ ನೂರಾರು ರೈತರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ಮೂಲಕ ಬಸ್ ನಿಲ್ದಾಣದ ದಿ.ಎಚ್.ನಾಗಪ್ಪ ವೃತ್ತಕ್ಕೆ ಆಗಮಿಸಿದರು. ಮಾನವ ಸರಪಳಿ ರಚಿಸಿ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸೆಸ್ಕ್ ಕಚೇರಿಗೆ ಮುಂಭಾಗ ತೆರಳಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಗೌಡಹಳ್ಳಿ ಸೋಮಣ್ಣ ಮಾತನಾಡಿ, ಎಲ್ಲೇಮಾಳ ಗ್ರಾಪಂ ವ್ಯಾಪ್ತಿಯ ಗಾಂಧಿನಗರ, ಗುಳ್ಯ, ಕೆ.ವಿ.ಎನ್.ದೊಡ್ಡಿ, ಎಂ.ಟಿ. ದೊಡ್ಡಿ, ಬೂದುಗುಪ್ಪೆ ಹಾಗೂ ಈ ಭಾಗದ ಇನ್ನಿತರ ಗ್ರಾಮದ ತೋಟದ ಮನೆಗಳಿಗೆ ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಇದರಿಂದ ರೈತರು ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇತ್ತ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಮಹಿಳೆಯರು ನೀರಿಗಾಗಿ ಬಿಂದಿಗೆ ಹಿಡಿದು ಹಳ್ಳಕೊಳ್ಳಗಳಿಗೆ ಅಲೆಯುಂತಾಗಿದೆ. ಜತೆಗೆ ಕಾಡುಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ರಾತ್ರಿ ವೇಳೆ ವಿದ್ಯುತ್‌ನದ್ದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ತುಂಬಾ ತೊಂದರೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಗಮನಹರಿಸಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮ.ಬೆಟ್ಟದಲ್ಲಿ ಆಯೋಜಿಸಲು ನಿರ್ಧರಿಸಿರುವ ಸಚಿವ ಸಂಪುಟ ಸಭೆಯನ್ನು ನಡೆಯಲು ಬಿಡುವುದಿಲ್ಲ. ಜತೆಗೆ ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಆದ್ದರಿಂದ ಸ್ಥಳಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಇದೀಗ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದೆ. ಆದರೆ ರಾತ್ರಿ ವೇಳೆ ವಿದ್ಯುತ್ ನೀಡದ ಪರಿಣಾಮ ಈ ಭಾಗದ ವಿದ್ಯಾರ್ಥಿಗಳ ಓದಿಗೆ ತುಂಬಾ ಸಮಸ್ಯೆಯಾಗಿ ಪರಿಣಮಿಸಿದೆ. ಕಾಡುಪ್ರಾಣಿಗಳ ಹಾವಳಿಯ ಜತೆಗೆ ರಾತ್ರಿಯನ್ನು ಕತ್ತಲೆಯಲ್ಲೇ ಕಳೆಯಬೇಕಿದೆ ಎಂದು ದೂರಿದರು.

ಇನ್ನು ಕೆಲ ರೈತರು ಮಾತನಾಡಿ, ಗುಂಡಾಲ್ ಜಲಾಶಯದಲ್ಲಿ ಕಾಲುವೆಗೆ ನೀರು ಹರಿಸಲು ನಿಯೋಜಿಲ್ಪಟ್ಟ ನೌಕರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಉಡಾಫೆಯಿಂದ ಉತ್ತರಿಸುತ್ತಾರೆ. ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಮುಖ್ಯ ಕಾಲುವೆಯಲ್ಲಿ ಹೂಳೆತ್ತಿಸಿ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಸೆಸ್ಕ್ ಎಇಇ ಶಂಕರ್ ಅವರು ಉತ್ತರಿಸಿ ಅಗತ್ಯ ಭರವಸೆ ನೀಡಿದರು. ಆದರೆ ಇದಕ್ಕೊಪ್ಪದ ಪ್ರತಿಭಟನಾಕಾರರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಇಲ್ಲವಾದಲ್ಲಿ ರಸ್ತೆ ಸಂಚಾರ ತಡೆ ನಡೆಸುವುದಾಗಿ ಎಚ್ಚರಿಸಿದರು. ಇಇ ತಬಸ್ಸುಮ್ ಬಾನು ಅವರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಆಲಿಸಿ ಮಾತನಾಡಿ, ಈ ಭಾಗದ ಗ್ರಾಮಗಳಿಗೆ ಕೌದಳ್ಳಿಯಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, 18 ಕಿ.ಮೀ.ಅಂತರ ಹೊಂದಿದೆ. ಹಾಗಾಗಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಪ್ರತ್ಯೇಕ ಲೈನ್ ಕಾಮಗಾರಿಯನ್ನು ಕೈಗೊಳ್ಳಲು ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತಿದೆ. ಹಾಗಾಗಿ 15 ದಿನದೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು. ಅಲ್ಲಿಯವರೆಗೆ ಕೆಲ ಕಾಮಗಾರಿಯನ್ನು ಕೈಗೊಂಡು 2 ದಿನದೊಳಗಾಗಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಇನ್ನು ನೀರಾವರಿ ಇಲಾಖೆಯ ಎಇ ನವೀನ್ ಪ್ರತಿಕ್ರಿಯಿಸಿ, ನೀರುಗಂಟಿಯ ವಿರುದ್ಧ ಕ್ರಮವಹಿಸಲಾಗುವುದು. ಒಂದು ವಾರದೊಳಗೆ ನಾಲೆಯಲ್ಲಿ ಹೂಳನ್ನು ತೆಗೆಸಿ ನೀರೊದಗಿಸಲಾಗುವುದು ಎಂದು ತಿಳಿಸಿದರು.

ಇನ್ನು ಇದೇ ವೇಳೆ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ತುಂಬಾ ತೊಂದರೆಯಾಗಿದೆ ಎಂದು ರೈತರು ದೂರಿದರು. ಇದಕ್ಕೆ ತಾಪಂ ಸಹಾಯಕ ನಿರ್ದೇಶಕಿ ರಾಧಾ ಪ್ರತಿಕ್ರಿಯಿಸಿ, ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆಯನ್ನು ಕೈ ಬಿಟ್ಟರು. ಪ್ರತಿಭಟನೆಯಲ್ಲಿ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಪವನ್‌ಕುಮಾರ್, ಗೌರವಾಧ್ಯಕ್ಷ ಪುಟ್ಟಸ್ವಾಮಿ, ಪದಾಧಿಕಾರಿಗಳಾದ ರಾಮಕೃಷ್ಣಪ್ಪ ಮಲ್ಲಿಕಾರ್ಜುನ, ಮಹದೇವಸ್ವಾಮಿ, ಪ್ರಭು, ನವೀನ್, ಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net