

ಕೆ.ಆರ್.ಪೇಟೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಬೇಕಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದ ವಿಭಾಗೀಯ ಸೆಸ್ಕ್ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸುಟ್ಟು ಹೋದ ಟಿಸಿಗಳನ್ನು ಬದಲಿಸಲು ರೈತರ ಆಧಾರ್ ಕಾರ್ಡ್ ಕೇಳುತ್ತಿದ್ದು, ಈ ಮೂಲಕ ರೈತರಿಗೆ ತೊಂದರೆ ನೀಡುತ್ತಿರುವ ಎಂಜಿನಿಯರುಗಳ ವಿರುದ್ಧ ಕ್ರಮ ಜರುಗಿಸಬೇಕು. ಅಧೀಕ್ಷಕ ಎಂಜಿನಿಯರ್ ಜತೆೆ ರೈತರ ಸಭೆ ಆಯೋಜಿಸುವಂತೆ ಒತ್ತಾಯಿಸಲಾಯಿತು.
ಹಣ ಕಟ್ಟಿಸಿಕೊಂಡು ಕೊಳವೆಬಾವಿಗಳಿಗೆ ಹೊಸ ಟಿಸಿಗಳನ್ನು ಅಳವಡಿಸಿಕೊಟ್ಟಿಲ್ಲ. ತಾಲೂಕಿನ ನೂರಾರು ರೈತರು ನಿಗದಿತ ಹಣ ಪಾವತಿಸಿ, ಒಂದು ವಷರ್ದಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಅವರ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಹಣ ಕಟ್ಟಿಸಿಕೊಂಡವರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು ಎಂದು ಎಂದು ಆಗ್ರಹಿಸಿದರು.
ರೈತ ಮುಖಂಡರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಕೃಷ್ಣ್ಣಮೂರ್ತಿ, ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್‌ಗೆ ಸರ್ಕಾರದ ಅನುದಾನ ಪಡೆಯಬೇಕಾಗಿರುವುದರಿಂದ ಹೊಸ ಪಂಪ್‌ಸೆಟ್ ರೈತರಿಗೆ ವಿದ್ಯುತ್ ಸಂಪರ್ಕ ನೀಡುವಾಗ ಆಧಾರ್ ಕೇಳುತ್ತಿದ್ದೇವೆ. ಸುಟ್ಟು ಹೋದ ಟಿಸಿ ಬದಲಿಸಲು ಆಧಾರ್ ಅಗತ್ಯವಿಲ್ಲ. ಟಿಸಿ ಅಳವಡಿಕೆ ಸೆಸ್ಕ್ ಜವಾಬ್ದಾರಿಯಾಗಿದ್ದು, ರೈತರ ಬಳಿ ಹಗ್ಗ, ವಾಹನ ಮತ್ತು ಹಣ ಕೇಳುವವರ ಬಗ್ಗೆ ರೈತರು ಲಿಖಿತ ದೂರು ನೀಡಿದರೆ ತಕ್ಷಣವೇ ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಹೊನ್ನೇಗೌಡ, ಸ್ವಾಮೀಗೌಡ, ಕಾಗೇಪುರ ಮಹೇಶ್, ಮರಡಹಳ್ಳಿ ರಾಮೇಗೌಡ, ಅರುಣಕುಮಾರ್, ವೆಂಕಟೇಶ್, ಯಶೋಧರ್, ರವಿಕುಮಾರ್, ಹಿರೀಕಳಲೆ ಬಸವರಾಜು, ಸೆಸ್ಕ್ ಸಹಾಯಕ ಎಂಜಿನಿಯರ್ ರಾಜಶೇಖರ್ ಇದ್ದರು.