ಸೆಲ್ಫಿಗಾಗಿ ಅಪಾಯ ಆಹ್ವಾನಿಸಿಕೊಳ್ಳುತ್ತಿರುವ ಪ್ರವಾಸಿಗರು

MDG ppolice
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಹೆದ್ದಾರಿಯ ಜಲಪಾತಗಳ ಬಳಿ ಪೊಲೀಸರು ಕಾವಲು ನಿಂತಿರುವುದು.
Published on

ಮೂಡಿಗೆರೆ: ತಾಲೂಕಿನಾದ್ಯಂತ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ನಲ್ಲಿ ಧುಮ್ಮಿಕ್ಕುವ ಜಲಪಾತಗಳಿಗೆ ಜೀವಕಳೆ ಬಂದಿದೆ. ಜಲಪಾತದ ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರು ತೆರಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಗಸ್ತು ಹೆಚ್ಚಿಸಿದೆ. ಜಲಪಾತ ವೀಕ್ಷಿಸುವ ನೆಪದಲ್ಲಿ ಅಪಾಯಕಾರಿ ಸ್ಥಳಕ್ಕೆ ತೆರಳುತ್ತಿರುವವರವನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ.

ಘಾಟ್ ಪ್ರದೇಶದ ಹೆದ್ದಾರಿಯುದ್ದಕ್ಕೂ ಸಿಗುವ ಜಲಪಾತಗಳ ಬಳಿ ಬೆಳಗ್ಗೆಯಿಂದ ರಾತ್ರಿವರೆಗೂ ಪ್ರವಾಸಿರು ವಾಹನಗಳನ್ನು ನಿಲ್ಲಿಸಿ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳುವುದು ಸಾಮಾನ್ಯವಾಗಿದೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಂಥ ಅಪಾಯಕಾರಿ ಜಾಗಕ್ಕೂ ತೆರಳುತ್ತಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಘಾಟ್ ರಸ್ತೆಯ ಅಲ್ಲಲ್ಲಿ ವ್ಯಾಪಾರಿಗಳು ತಿಂಡಿ, ತಿನಿಸುಗಳ ಅಂಗಡಿಗಳನ್ನು ತೆರೆದಿದ್ದಾರೆ. ಪ್ರವಾಸಿಗರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಹಾಗೂ ಬೀದಿ ಬದಿ ವ್ಯಾಪಾರದಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಪೊಲೀಸ್ ವಾಹನ ಬಂದಾಗ ಪ್ರವಾಸಿಗರು ವಾಹನಗಳನ್ನು ರಸ್ತೆ ಬದಿಯಿಂದ ತೆರವುಗೊಳಿಸುತಾರೆ. ಪೊಲೀಸರು ಹೋಗುತ್ತಿದ್ದಂತೆ ಪುನಃ ರಸ್ತೆಗೆ ಹೊಂದಿಕೊಂಡಂತೆ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಘಾಟ್ ರಸ್ತೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಚಾಲಕರು ಪರದಾಡುವಂತಾಗಿದೆ. ವಾಹನ ನಿಲುಗಡೆಗೆ ಸಂಬಂಧಿಸಿದಂತೆ ವಾಹನ ಚಾಲಕರ ನಡುವೆ ಗಲಾಟೆಗಳೂ ನಡೆಯುತ್ತದೆ. ಘಾಟ್ ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವ ಹಾಗೂ ಅಪಾಯಕಾರಿ ಸ್ಥಳಕ್ಕೆ ತೆರಳಿ ಫೋಟೋ ಕ್ಲಿಕ್ಕಿಸುವ ಮತ್ತು ರಸ್ತೆ ಬದಿ ವಾಹನ ನಿಲ್ಲಿಸಿ ಇತರರಿಗೆ ತೊಂದರೆ ನೀಡುತ್ತಿರುವವರಿಗೆ ಪೊಲೀಸರು ಲಾಟಿ ರುಚಿ ತೋರಿಸುತ್ತಿದ್ದಾರೆ.

ಚಾರ್ಮಾಡಿ ಘಾಟ್‌ನಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು. ಅನಗತ್ಯವಾಗಿ ರಸ್ತೆ ಬದಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಲಪಾತದ ಮೂಲಕ ಮೀಸಲು ಅರಣ್ಯ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿ ಹಾಡು ಹಾಕಿಕೊಂಡು ನೃತ್ಯ ಮಾಡುತ್ತ ಇತರ ವಾಹನಗಳಿಗೆ ತೊಂದರೆಯುಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಘಾಟ್ ಪ್ರದೇಶದ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರ ಒತ್ತಾಯ.

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಕೆಲವರು ಜಲಪಾತದ ಮೇಲ್ಭಾಗದ ಅಪಾಯಕಾರಿ ಜಾಗಕ್ಕೆ ತೆರಳುತ್ತಿದ್ದಾರೆ. ಆಲೆಕಾನ್ ಹೊರಟ್ಟಿ ತಿರುವಿನ ಕೆಳಭಾಗದಲ್ಲಿರುವ ಜಲಪಾತಕ್ಕಿಳಿದು ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಈ ಹಿಂದೆ ಹಲವು ಮಂದಿ ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಜಲಪಾತದ ಮೇಲ್ಭಾಗದ ರಸ್ತೆ ಬದಿಯಲ್ಲಿ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ಫಲಕ ಹಾಕಲಾಗಿದೆ. ಅದನ್ನು ಲೆಕ್ಕಿಸದೆ ಜಲಪಾತದ ಮೇಲ್ಭಾಗಕ್ಕೆ ತೆರಳುತ್ತಿದ್ದಾರೆ. ಸಂಜೆ ಹಾಗೂ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯಪಾನ ಮಾಡುವುದು, ಕಾರಿನಲ್ಲಿ ಹಾಡು ಹಾಕಿಕೊಂಡು ರಸ್ತೆಯಲ್ಲಿ ಡಾನ್ಸ್ ಮಾಡುತ್ತ ರಸ್ತೆಯಲ್ಲಿ ಬೇರೆ ವಾಹನಗಳಿಗೆ ತೊಂದರೆ ಉಂಟು ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net