ಸೆರೆ ಸಿಗದ ಚಾಲಾಕಿ ಹುಲಿ

25300892_thuews-2
Published on

ಚಾಮರಾಜನಗರ: ತಾಲೂಕಿನ ಹಲವು ಗ್ರಾಮಗಳಲ್ಲಿ ಭೀತಿ ಹುಟ್ಟಿಸಿರುವ ಚಾಲಾಕಿ ಹುಲಿ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಗದೆ ಮತ್ತಷ್ಟು ಆತಂಕ ಮೂಡಿಸಿದೆ.

ಇತ್ತೀಚೆಗೆ ಕಲ್ಪುರ, ಉಗನೇದಹುಂಡಿ ಗ್ರಾಮಗಳಲ್ಲಿ ಹಸು ಬಲಿ ಪಡೆದ ಅಕ್ಕ-ಪಕ್ಕದ ಗ್ರಾಮಗಳ ಜನರಲ್ಲೂ ಹುಲಿ ಆತಂಕ ಮೂಡಿಸಿದೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಜಮೀನಿಗೆ ಬರುವ ರೈತರಿಗೆ ಭದ್ರತೆ ನೀಡಲಾಗಿತ್ತು. ಬೋನು ಇರಿಸಿ, ಕ್ಯಾಮರಾ ಅಳವಡಿಸಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅ.29ರಂದು ಕಟ್ನವಾಡಿ, ಉಗನೇದಹುಂಡಿ, ಉಡಿಗಾಲ ಮತ್ತು ಮಡುವಿನಬೀಡು ಗ್ರಾಮಗಳಲ್ಲಿ ಒಂದು ದಿನದಟ್ಟಿಗೆ ನಿಷೇಧಾಜ್ಞೆ ಜಾರ ಮಾಡಲಾಗಿತ್ತು. ಆದರೂ ಬೋನಿಗೆ ಬೀಳದ ಚಾಲಾಕಿ ಹುಲಿ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಮತ್ತಿನ್ನೆಲ್ಲಿ ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆಯಲಿದೆಯೋ ಅಥವಾ ಜನರ ಮೇಲೆ ಎರಗಿ ಪ್ರಾಣ ತೆಗೆಯುತ್ತದೋ ಎಂಬ ದುಗುಡ ಕಾಡುತ್ತಿದೆ.

ವಾಕ್ ಥ್ರೂ ಗೇಜ್ ಖೆಡ್ಡಾ: ಹುಲಿಯನ್ನು ಸೆರೆ ಹಿಡಿಯಲು ವಾಕ್ ಥ್ರೂ ಗೇಜ್ ಖೆಡ್ಡಾ ತೋಡಲಾಗಿದೆ. ವ್ಯಾಘ್ರ ಮಾತ್ರ ಬಲೆಗೆ ಬೀಳುತ್ತಿಲ್ಲ. ವಾಕ್ ಥ್ರೂ ಗೇಜ್ ಸಾಮಾನ್ಯ ಬೋನುಗಳ ರೀತಿಯಲ್ಲಿ ಇಲ್ಲ. ಈ ಸಾಮಾನ್ಯ ಬೋನುಗಳಲ್ಲಿ ಒಂದು ಕಡೆ ಮಾತ್ರ ಬಾಗಿಲು ಇರುತ್ತದೆ. ಬೋನಿನೊಳಗೆ ಕಟ್ಟಿ ಹಾಕಿರುವ ಕರುವನ್ನು ನೋಡಿ ಬೇಟೆಯಾಡಲು ಹುಲಿ ಒಳಗೆ ಬರುತ್ತಿದ್ದಂತೆಯೇ ಬಾಗಿಲು ಮುಚ್ಚಿಕೊಳ್ಳುತ್ತದೆ. ಆದರೆ ವಾಕ್ ಥ್ರೂ ಗೇಜ್‌ಗೆ ಎರಡೂ ಕಡೆ ಬಾಗಿಲುಗಳಿವೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಓಡಾಡಬಹುದು. ಯಾವುದೇ ಕಡೆಯಿಂದ ಪ್ರವೇಶವಾದರೂ ಎರಡೂ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ಈ ರೀತಿಯ ವಿಶೇಷತೆ ಹೊಂದಿರುವ ಬೋನಿಗೆ ಕರುವನ್ನು ಕಟ್ಟಿಹಾಕಿ ಕಾಯಲಾಗುತ್ತಿದೆ. ಚಾಲಕಿ ಹುಲಿ ಮಾತ್ರ ಸೆರೆ ಸಿಗದೆ ಆಟವಾಡಿಸುತ್ತಿದೆ.

ಮಧ್ಯದಲ್ಲಿ ಚಿರತೆ ಕಾಟ: ಒಂದೆಡೆ ಹುಲಿ ಉಪಟಳ ನೀಡುತ್ತಿದ್ದರೆ ಮತ್ತೊಂದು ಕಡೆ ಚಿರತೆ ಕಾಟ ಕೊಡುತ್ತಿದೆ. ತಾಲೂಕಿನ ವೀರನಪುರ ಗ್ರಾಮದ ಗುರುಸ್ವಾಮಿ ಅವರ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ. ಒಂದು ವೇಳೆ ಕರುವಿನ ಜಾಗದಲ್ಲಿ ಮನುಷ್ಯನಿದ್ದಿದ್ದರೆ ನರಬಲಿಯಾಗುತ್ತಿತ್ತು ಎನ್ನುವ ಆತಂಕದಲ್ಲಿ ರೈತ ಗುರುಸ್ವಾಮಿ ಹೆದರಿ ಹೋಗಿದ್ದಾರೆ. ಒಂದೆಡೆ ಹುಲಿ ದಾಳಿ ಮತ್ತೊಂದು ಕಡೆ ಚಿರತೆ ಹಾವಳಿ ಮತ್ತಷ್ಟು ಭಯವನ್ನು ಹುಟ್ಟುಹಾಕಿದೆ.

ಹುಲಿಗಳದ್ದೇ ಸದ್ದು ಸುದ್ದಿ:

ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳದ್ದೇ ಹೆಚ್ಚು ಸದ್ದು ಸುದ್ದಿಯಾಗುತ್ತಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯದಲ್ಲಿ ಐದು ಹುಲಿಗಳಿಗೆ ವಿಷ ಹಾಕಿ ಕೊಂದ ಪ್ರಕರಣ ದೊಡ್ಡ ಸದ್ದು ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಕಾವೇರಿ ವನ್ಯಜೀವಿಧಾಮದಲ್ಲಿ ತಾಯಿ ಹುಲಿ ಮರಿಗಳನ್ನು ಬಿಟ್ಟು ಹೋಗಿತ್ತು. ಮತ್ತೆ ಕೆಲವು ದಿನಗಳ ನಂತರ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಡಿನಿಂದ ಹೊರಬಂದ ಹುಲಿಯೊಂದು ಗಾಯಗೊಂಡು ಹೊರಬಂದಿತ್ತು. ಅಲ್ಲದೇ, ಮೂರು ಮರಿಗಳನ್ನು ತಾಯಿ ಹುಲಿ ಬಿಟ್ಟು ಹೋಗಿತ್ತು. ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿಗೆ ವಿಷ ಹಾಕಿ ಕೊಂದು ತುಂಡು ತುಂಡಾಗಿ ಕತ್ತರಿಸಲಾಗಿತ್ತು. ಇದಾದ ಬಳಿಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿರುವುದು ವರದಿಯಾಗುತ್ತಿದೆ. ಚಾಮರಾಜನಗರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಹುಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಅರಣ್ಯ ಇಲಾಖೆಗೆ ತಲೆಬಿಸಿ: ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳವಾಗಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಒಂದಲ್ಲ ಒಂದು ಕಡೆ ಕಾಡುಪ್ರಾಣಿಗಳು ಹಾವಳಿ ಇಡುತ್ತಿರುವುದನ್ನು ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಅರಣ್ಯ ಸಂರಕ್ಷಣೆಗೆ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಇಲಾಖೆ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ವನ್ಯಜೀವಿಗಳ ಸೆರೆಯ ಕಾರ್ಯಾಚರಣೆಯಲ್ಲೂ ತೊಡಗಿಕೊಳ್ಳಬೇಕಾಗಿದೆ.

ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಇದೆಯೋ ಅಥವಾ ಇಲ್ಲವೋ ತಿಳಿಯುತ್ತಿಲ್ಲ. ಒಂದರ ನಂತರ ಮತ್ತೊಂದು ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿ ಮಾಡಿ ಜಾನುವಾರುಗಳನ್ನು ಸಾಯಿಸುತ್ತಿವೆ. ಅರಣ್ಯ ಇಲಾಖೆಗೆ ಪ್ರಾಣಿಗಳ ಹಾವಳಿ ತಡೆಯಲು ಸಾಧ್ಯವಾಗದೆ ಇದ್ದರೆ ಜನರಿಗೇ ಜವಾಬ್ದಾರಿ ನೀಡಲಿ. ನಾವೇ ಕಠಿಣ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮೂಡ್ಲುಪುರ ನಂದೀಶ್, ಮುಖಂಡ, ಚಾಮರಾಜನಗರ ಕಲ್ಪುರ ಮತ್ತು ಉಗನೇದಹುಂಡಿ ಗ್ರಾಮಗಳಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿನ ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲು ರೈತರಿಗೆ ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ಹುಲಿ ಸೆರೆ ಹಿಡಿಯಲು ಕ್ರಮವಹಿಸಲಾಗುತ್ತಿದೆ. ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net