

ಚಿತ್ರದುರ್ಗ: ರಾಜ್ಯದಲ್ಲಿ ಶೇ.99 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ 130 ತಾಲೂಕುಗಳ ಬರ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಆಯಾ ಡಿಸಿಗಳಿಗೆ ಸೂಚಿಸಿದ್ದು, ಅದನ್ನು ಆಧರಿಸಿ ಸೆಪ್ಟೆಂಬರ್ ಮೊದಲ ವಾರ ಬರ ಘೋಷಣೆ ಕುರಿತು ತೀರ್ಮಾನಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಮಂಗಳವಾರ ಬರ ಸಮೀಕ್ಷೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಪ್ರತಿ ವಾರವೂ ಬರಪೀಡಿತ ತಾಲೂಕುಗಳ ಅಂಕಿ-ಸಂಖ್ಯೆ ಬದಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡುವ ಮಾರ್ಗಸೂಚಿಗಳಲ್ಲೂ ಸರಳತೆ ತರಲು ಯೋಚಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಚಿಸಲಾಗಿದೆ. ಬೆಳೆ ಪರಿಹಾರದ ಹಣ ತಾಂತ್ರಿಕ ಕಾರಣದಿಂದ ಬೇರೆಯವರ ಖಾತೆಗೆ ಜಮಾ ಆಗಿದ್ದರೆ, ಪರಿಶೀಲಿಸಿ ಅರ್ಹರಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ತಾಕತ್ತು ಪ್ರದರ್ಶಿಸಲು ಬಂದಿಲ್ಲ: ತಾಕತ್ತು ಇದ್ದರೆ ಭ್ರಷ್ಟಾಚಾರದ ತನಿಖೆ ನಡೆಸಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ಸಿಗಲಿದೆ. ಕುಸ್ತಿ ಆಟವಾಡಿ ತಾಕತ್ತು ಪ್ರದರ್ಶಿಸಲು ಬಂದಿಲ್ಲ. ರಾಜ್ಯದ 6.5 ಕೋಟಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಾಂಗ್ರೆಸ್ ಬದ್ಧವಾಗಿದೆ. 5 ಗ್ಯಾರಂಟಿ ಅನುಷ್ಠಾನ ಸೇರಿ ಬರ ಸ್ಥಿತಿ ವೇಳೆ ಜನರಿಗೆ ನೆರವಾಗುವ ಉದ್ದೇಶ ನಮ್ಮ ಪಕ್ಷದ್ದಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಯಾವ ಮಾತೂ ಈವರೆಗೂ ನಡೆದಿಲ್ಲ ಎಂದು ತಿರುಗೇಟು ನೀಡಿದರು.
ನಾಯಕತ್ವವನ್ನು 3 ತಿಂಗಳಾದರೂ ಕೊಡಲಿಲ್ಲ ಎಂಬ ಕೂಗು ಬಿಜೆಪಿಯಲ್ಲಿ ಕೇಳಿಬರುತ್ತಿದೆ. ರಾಜ್ಯದ ಹಲವೆಡೆ ಬರವಿದ್ದರೂ ವಿರೋಧ ಪಕ್ಷದ ನಾಯಕ ಇಲ್ಲ. ಅಂತಹ ಪಕ್ಷದಲ್ಲಿ ಇರಬೇಕೋ, ಬೇಡವೋ ಎಂಬ ಅಭಿಪ್ರಾಯ ಹಲವರಲ್ಲಿದೆ. ಕಾಂಗ್ರೆಸ್ಸಿಗರು ಯಾರನ್ನೂ ಸಂಪರ್ಕಿಸುತ್ತಿಲ್ಲ. ಸ್ವ-ಇಚ್ಛೆಯಿಂದ ಬಿಜೆಪಿ, ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ತತ್ವ ಮತ್ತು ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತಿಸುತ್ತೇವೆ. ನಮಗೀಗ ಶಾಸಕರ ಕೊರತೆ ಇಲ್ಲ. ಬಲವಂತ ಕೂಡ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
5 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಹರಿಸುವಂತೆ ತಮಿಳುನಾಡು ಕೇಳಿದೆ. ಸರ್ಕಾರ ಇದಕ್ಕೆ ಒಪ್ಪಿಲ್ಲ. ಇದಕ್ಕಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಮಂಗಳವಾರ ಕರೆದಿದ್ದು, ತಾಂತ್ರಿಕ ಪರಿಣತರ ಸಲಹೆ ಪಡೆದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ನಿಯಂತ್ರಣ ಪ್ರಾಧಿಕಾರದ ನಡುವಿನ ಕೊಂಡಿಯಾಗಿಯೂ ರಾಜ್ಯದ ಪ್ರಾಧಿಕಾರ ಕೆಲಸ ಮಾಡುತ್ತಿದೆ ಎಂದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಇತರರಿದ್ದರು.