

ಮೈಸೂರು: ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿರುವುದು ಗೊತ್ತಿಲ್ಲ. ಅದನ್ನು ಹೈಕಮಾಂಡ್ ನಾಯಕರನ್ನೇ ಕೇಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮವಾಗಿ ಆಡಳಿತ ನೀಡುತ್ತಿದ್ದು, ಮುಂದೆಯೂ ನೀಡಲಿದ್ದಾರೆ. ಇದರಲ್ಲಿ ಯಾವ ಅನುಮಾನ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಸ್ಥಿರತೆ ಮತ್ತು ಭದ್ರತೆಯಿಂದ ಇದೆ. 5 ವರ್ಷಗಳ ಕಾಲ ಯಾವ ಗೊಂದಲ ಇಲ್ಲದೆ ಮುಂದುವರಿಯುತ್ತದೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿ, ಮಹಾಕ್ರಾಂತಿಯೂ ನಡೆಯಲ್ಲ ಎಂದು ಹೇಳಿದರು.
ನಾವು ವರ್ಷಕ್ಕೊಂದು ಬಾರಿ ಬರುವ ಸಂಕ್ರಾಂತಿ ಕೇಳಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಕ್ರಾಂತಿಗಳು ನಡೆಯುತ್ತಲೇ ಇರುತ್ತದೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಕ್ರಾಂತಿ ನನಗೇನೂ ಗೊತ್ತಿಲ್ಲ. ಐದು ವರ್ಷಗಳ ಕಾಲ ಯಾವುದೇ ಅನುಮಾನ ಇಲ್ಲದೆ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ ಎಂದರು.
ಮುಖ್ಯಮಂತ್ರಿ ಕುರ್ಚಿ ಇರುವುದು ಒಂದು. ಅದರಲ್ಲಿ ಕುಳಿತಿರುವವರು ಒಬ್ಬರೇ ಆಗಿದ್ದಾರೆ. ಸಿಎಂ ಸ್ಥಾನದ ಬಯಕೆ ಎಲ್ಲರಲ್ಲೂ ಇರುವುದು ಸಹಜ. ಇರುವ ಕುರ್ಚಿಯಲ್ಲಿ ಕುಳಿತಿರುವುದರಿಂದ ಇನ್ನೆಲ್ಲಿ ಕೂರಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಹೈಕಮಾಂಡ್ ಅಲ್ಲ, ಅವರೊಬ್ಬ ಪ್ರತಿಪಕ್ಷದ ನಾಯಕ. ಇಕ್ಬಾಲ್ ಅನ್ಸಾರಿ ಅವರು ಹೊಸದಿಲ್ಲಿಯಲ್ಲಿ ನಡೆದ ಸಭೆಯ ಬಗ್ಗೆ ಯಾವ ರೀತಿಯಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ನಾನಂತೂ ಇರಲಿಲ್ಲ. ಯಾವ್ಯಾವ ಅರ್ಥದಲ್ಲಿ ಏನೇನು ಮಾತನಾಡುತ್ತಾರೋ ಎಂಬುದು ಗೊತ್ತಿಲ್ಲ. ಅವರನ್ನೇ ಕೇಳಬಹುದು ಎಂದು ಹೇಳಿದರು.
ಆನೆ ನಡೆದುಕೊಂಡು ಹೋಗುವಾಗ ಏನೋ ಬೀಳುತ್ತದೆ ಎನ್ನುವಂತೆ ಕಾದಿರುತ್ತಾರೆ. ಅದು ಬೀಳಲ್ಲ. ಬಿಜೆಪಿಯವರು ಕಾಯುವುದನ್ನು ಬಿಡಲ್ಲ. ಬಿಜೆಪಿ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಕುಟುಕಿದರು.
ಕೆಲ ಶಾಸಕರು ಅವರವರ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿರಬಹುದು. ಅದಕ್ಕೂ-ನಮಗೂ ಸಂಬಂಧವಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ದಾರೆ. ಅವರೇ ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಅಶೋಕ್ ಹೇಳಿದಂತೆ ಯಾವ ಬದಲಾವಣೆಯೂ ಇಲ್ಲ. ನನ್ನ ಆತ್ಮವಿಶ್ವಾಸದ ಪ್ರಕಾರ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿಯೇ ಇರುತ್ತದೆ ಎಂದು ಹೇಳಿದರು.
ಮೈಸೂರಿನಲ್ಲಿ ಮೊದಲಿನಿಂದಲೂ ದಸರಾ ಮಹೋತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಚಾಮರಾಜನಗರದಲ್ಲಿ ಆಚರಣೆ ಮಾಡುತ್ತಿರಲಿಲ್ಲ. ಮೈಸೂರು ದಸರಾ ಮಹೋತ್ಸವದ ಪ್ರಾಮುಖ್ಯವನ್ನು ಡೈವರ್ಟ್ ಮಾಡಬೇಡಿ ಎನ್ನುವ ಅರ್ಥದಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದರು.