ಸೆಂಟ್ರಲ್​ನಲ್ಲಿ ಫಲಿಸಿದ ಬಿಜೆಪಿ ತಂತ್ರ

BJP NEW LOGO
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಸೇರಿದಂತೆ ಹಲವಾರು ಸ್ಥಾನಮಾನಗಳನ್ನು ಬಿಜೆಪಿಯಿಂದ ಅನುಭವಿಸಿ, ಕೊನೆಗೆ ಕಾಂಗ್ರೆಸ್​ಗೆ ವಲಸೆ ಹೋಗಿದ್ದ ಜಗದೀಶ ಶೆಟ್ಟರ್ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಬಿಜೆಪಿಯ ಸ್ಟಾರ್​ಪ್ರಚಾರಕರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಸಿದ ರಾಜಕೀಯ ತಂತ್ರ ಸಫಲವಾಗಿದೆ.

ಜಗದೀಶ ಶೆಟ್ಟರ್ ಕಾಂಗ್ರೆಸ್​ಗೆ ವಲಸೆ ಹೋದ ನಂತರ ಹುಬ್ಬಳ್ಳಿ-ಧಾರವಾಡ ರಾಷ್ಟ್ರ ರಾಜಕಾರಣದ ಗಮನ ಸೆಳೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್​ನ ಘಟಾನುಘಟಿಗಳು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.

ಮತದಾನಕ್ಕೆ ಕೆಲವು ದಿನಗಳು ಬಾಕಿ ಇರುವ ಮುಂಚೆಯೇ ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಿದ್ದರು.

ಚುನಾವಣೆ ಘೋಷಣೆಗೊಳ್ಳುವ ಮುಂಚೆಯೇ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಿದ್ದರು. ಶೆಟ್ಟರ್ ವಲಸೆ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಚಿವರಾದ ಸ್ಮೃತಿ ಇರಾಣಿ ಸೇರಿದಂತೆ ಅನೇಕ ಪ್ರಮುಖರು ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಪ್ರಚಾರ ನಡೆಸಿದ್ದರು. ಅಮಿತ್ ಷಾ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಶೆಟ್ಟರ್ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಿಗೆ ಕರೆ ನೀಡಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿಯೇ ತಂಗಿದ್ದರು. ಮಾಜಿ ಸಂಸದ ಡಾ. ವಿಜಯ ಸಂಕೇಶ್ವರ ಕ್ಷೇತ್ರದ ಉದ್ದಗಲಕ್ಕೂ ಪ್ರಚಾರ ನಡೆಸಿದ್ದರು. ಸ್ಯಾಂಡಲ್​ವುಡ್ ನಾಯಕ ನಟ ಕಿಚ್ಚ ಸುದೀಪ ರೋಡ್ ಶೋ ನಡೆಸಿ, ಬಿಜೆಪಿಗೆ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.

ಇದೆಲ್ಲದರ ಫಲಿತಾಂಶವೆಂದರೆ, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಇದ್ದರೂ ಮತದಾರರು ಸತತ ಏಳನೇ ಬಾರಿಗೆ ಬಿಜೆಪಿಗೆ ವರಮಾಲೆ ಹಾಕಿದರು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಸಾರಿ ಹೇಳಿದರು.

ಬಾಕ್ಸ್

ಫಲಿಸದ ಲಿಂಗಾಯತ ಟ್ರಂಪ್​ಕಾರ್ಡ್

ಮಾಜಿ ಸಿಎಂ, ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಚುನಾವಣೆ ಕಣದಲ್ಲಿ ಪ್ರಯೋಗಿಸಿದ್ದ ಲಿಂಗಾಯತ ಟ್ರಂಪ್​ಕಾರ್ಡ್ ಸಫಲಗೊಳ್ಳಲಿಲ್ಲ.

ನನಗೆ ಬಿಜೆಪಿ ಟಿಕೆಟ್ ತಪ್ಪಿಸುವ ಮೂಲಕ ಲಿಂಗಾಯತರಿಗೆ ಅನ್ಯಾಯ ಮಾಡಲಾಗಿದೆ ಎಂದು ಜಗದೀಶ ಶೆಟ್ಟರ್ ಲಿಂಗಾಯತರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಆದರೆ, ಕ್ಷೇತ್ರದ ಮತ್ತೊಬ್ಬ ಲಿಂಗಾಯತರೂ ಆಗಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡುವ ಮೂಲಕ ಶೆಟ್ಟರ್ ಅವರು ಮತದಾರರ ಅನುಕಂಪ ಪಡೆದುಕೊಳ್ಳುವ ಯತ್ನಕ್ಕೆ ಕಮಲ ಪಡೆ ಟಾಂಗ್ ನೀಡಿತ್ತು.

ಸತತ ಏಳು ಬಾರಿ ಶಾಸಕರಾಗಿ ಪಕ್ಷದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅನುಭವಿಸಿದರೂ, ಜಗದೀಶ ಶೆಟ್ಟರ್ ಅವರಿಗೆ ಅಧಿಕಾರದ ದಾಹ ಪೂರ್ಣಗೊಂಡಿಲ್ಲ. ಯುವ ರಾಜಕಾರಣಿಗಳಿಗೆ ಅವಕಾಶ ನೀಡಲು ಶೆಟ್ಟರ್ ಹಿಂದೇಟು ಹಾಕುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಮತದಾರರ ಮೇಲೆ ಪ್ರಯತ್ನ ಬೀರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net