

ಕೋಲಾರ : ಜಿಲ್ಲಾ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಸೆ.೯ರಂದು
ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ನ್ಯಾಯಾಲಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶುಕ್ಲಾಕ್ಷ ಪಾಲನ್ ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯ ಮತ್ತು ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು ಮತ್ತು ಕೆ.ಜಿ.ಎಫ್‌ನ ನ್ಯಾಯಾಲಯಗಳಲ್ಲಿ ಜನತಾ ನ್ಯಾಯಾಲಯ ನಡೆಸಲಾಗುತ್ತಿದೆ. ಇದರಲ್ಲಿ ಉಭಯ ಪಕ್ಷಗಾರರು, ಅವರ ವಕೀಲರು ಪೂರ್ವ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರಕರಣಗಳನ್ನು ಸಂಧಾನ ಮೂಲಕ ಬಗೆಹರಿಸಿಕೊಳ್ಳಬಹುದು. ಈ ರ‍್ಯಾಯ ನ್ಯಾಯ ವಿತರಣೆ ಜನಮನ್ನಣೆ ಪಡೆದುಕೊಂಡಿದ್ದು, ಎರಡೂ ಕಡೆಯವರು ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಪ್ರಕರಣ ನಡೆಯುತ್ತಿರುವ ನ್ಯಾಯಾಲಯಕ್ಕೆ ಪ್ರಕರಣ ರಾಜಿ ಮಾಡಿಕೊಳ್ಳುವ ಕುರಿತು ತಿಳಿಸುವ ಅಥವಾ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದರು.
ಜನತಾ ನ್ಯಾಯಾಲಯದಲ್ಲಿ ಸಿವಿಲ್, ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೆöÊಮ್‌ಗಳು, ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನೆಯನ್ನು ಹೊರತು ಪಡಿಸಿ), ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಸಾಲ ವಸೂಲಾತಿ, ನ್ಯಾಯಾಧೀಕರಣ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯಗಳಲ್ಲಿ ಪ್ರಕರಣಗಳು, ಕಾರ್ಮಿಕರ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದಂತೆ ಸೇವಾ ಪ್ರಕರಣಗಳು, ಪಿಂಚಣಿ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳು, ಜೀವನಾಂಶ ಪ್ರಕರಣಗಳು, ರಾಜಿಯಾಗುವ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಅವಕಾಶವಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಜು.೮ರಂದು ನಡೆದ ಜನತಾ ನ್ಯಾಯಾಲಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿನ ೭೧೪೩ ಚಾಲ್ತಿ ಪ್ರಕರಣಗಳು, ೩೫೦೨ ವ್ಯಾಜ್ಯ ಪೂರ್ವ ಬ್ಯಾಂಕ್ ಪ್ರಕರಣಗಳು ಸೇರಿ ಒಟ್ಟು ೧೦೬೪೫ ಪ್ರಕರಣಗಳು ರಾಜಿ ಮೂಲಕ ಮುಕ್ತಾಯಗೊಂಡಿರುತ್ತವೆ. ಆಗ ೨೬,೧೮,೩೪,೪೫೩ ರೂ. ಪರಿಹಾರ ರಾಜಿ ಮೂಲಕ ಪಾವತಿಯಾಗಿರುತ್ತದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಮತ್ತಿತರರು ಉಪಸ್ಥಿತರಿದ್ದರು.