

ಬಾಗಲಕೋಟೆ: ಜಿಲ್ಲೆಯಾದ್ಯಂತ ಸೆ.೨೬ ರಿಂದ ಅ.೨೫ ವರೆಗೆ ಜಾನುವಾರುಗಳಿಗೆ ೪ನೇ ಸುತ್ತಿನ ಕಾಲು ಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಜಾನುವಾರುಗಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎಲ್ಲ ಗ್ರಾಮಗಳ ಮೈಕ್ರೋ ಪ್ಲಾನ್‌ಗಳ ಮೂಲಕ ಕಾರ್ಯಕ್ರಮ ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸಲು ಅಽಕಾರಿಗಳಿಗೆ ಸೂಚಿಸಿದರು.
ಲಸಿಕಾ ಕಾರ್ಯಕ್ಕೆ ಮೈಕ್ರೋಪ್ಲಾನ್ ಪ್ರಕಾರ ೪೦೩೨ ಬ್ಲಾಕ್‌ಗಳನ್ನು ರಚಿಸಲಾಗಿದೆ. ಒಟ್ಟು ೪.೪ ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ ಇಲಾಖೆಯಿಂದ ೧೯೮ ಹಾಗೂ ಇಲಾಖೇತರದಿಂದ ೨೦೧ ಸೇರಿ ಒಟ್ಟು ೩೯೯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೯೩೯೪ ಲಸಿಕೆ ವೈಲ್‌ಗಳನ್ನು ತಾಲೂಕುವಾರು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಲಾದ ಲಸಿಕೆಯನ್ನು ಸಮರ್ಪಕ ಬಳಕೆ ಮಾಡಿ ತಮ್ಮ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಕ್ಷೇತ್ರ ಭೇಟಿ ಮಾಡಿ ಮುತುವರ್ಜಿ ವಹಿಸಲು ಮುಖ್ಯ ಪಶು ವೈದ್ಯಾಽಕಾರಿಗಳಿಗೆ ಸೂಚಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಶಿಕ್ಷಣ ಇಲಾಖೆಯ ಉಪಸನ್ವಯಾಧಿಕಾರಿ ಸಿ.ಆರ್.ಓಣಿ ಸೇರಿದಂತೆ ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.