ಸೆ.೨೫ ರಂದು ಜನತಾ ದರ್ಶನ ಕಾರ್ಯಕ್ರಮ

bkt-21-1
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿ.ಪಂ ಸಿಇಒ ಶಶಿಧರ ಕುರೇರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ ಜರುಗಿತು.
Published on

ಬಾಗಲಕೋಟೆ: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಸೆ.೨೫ ರಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಸಿಇಒ ಶಶಿಧರ ಕುರೇರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜರುಗಿದ ಜನತಾ ದರ್ಶನ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ನಡೆಯಲಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ಅಹವಾಲುಗಳನ್ನು ಸಲ್ಲಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಡಳಿತದಿಂದ ಮನವಿ ಮಾಡಿದರು.

ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಅಹವಾಲು ಸಲ್ಲಿಸಬಹುದು. ಸಂಬಂಧಪಟ್ಟ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜನತಾ ದರ್ಶನದಲ್ಲಿ ಉಪಸ್ಥಿತರಿದ್ದು, ಸ್ಥಳದಲ್ಲಿಯೇ ನಿಯಮಾನುಸಾರ ಪರಿಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಕ್ರಮವಹಿಸಲಾಗುವುದು. ಅಗತ್ಯವಿದ್ದಲ್ಲಿ ದೂರುದಾರರಿಗೆ ಹಿಂಬರಹ ನೀಡಿ ಕಾಲಮೀತಿಯಲ್ಲಿ ಅವರ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಬೇಕು ಎಂದರು.

ಜನತಾ ದರ್ಶನ ದಿನದಂದು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು, ಸಾರ್ವಜನಕರಿಂದ ಸ್ವೀಕೃತವಾದ ಎಲ್ಲ ಅರ್ಜಿಗಳು, ಮನವಿಗಳನ್ನು ಈಗಾಗಲೇ ಚಾಲ್ತಿಯಲ್ಲಿರುವ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಕಲಿಸಿ ವಿಲೇವಾರಿ ನಿರ್ವಹಣೆ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಸಲ್ಲಿಕೆಯಾಗುವ ಎಲ್ಲ ರೀತಿಯ ಅರ್ಜಿಗಳನ್ನು ಬಹಳಷ್ಟು ಜಾಗೃತಿಯಿಂದ ಹಾಗೂ ಸಹಾನುಭೂತಿಯಿಂದ ಪರಿಶೀಲಿಸಿ ನಿಗದಿತ ಕಾಲಾವಽಯೊಳಗೆ ನಿಯಮಾನುಸಾರ ಪರಿಹಾರೋಪಾಯಗಳನ್ನು ಒದಗಿಸುವ ಕುರಿತು ಪ್ರಾಮಾಣಿಕವಾಗಿ ಅಗತ್ಯ ಕ್ರಮಕೈಗೊಳ್ಳಲು ಅಽಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿದಂತೆ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net