ಸೆ. ೨೪ರಂದು ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರ

18 ckm 4 sunil kumar
ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಸಿ ಸುನಿಲ್ ಕುಮಾರ್
Published on

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಶಾಖೆ ಹೋರಾಟದೊಂದಿಗೆ ಸಾಮಾಜಿಕ ಸೇವಾ ಕಾರ್ಯ ಆರಂಭಿಸಲಾಗಿದ್ದು, ಇದರ ಭಾಗವಾಗಿ ಸೆ. ೨೪ರಂದು ಕೆ.ಎಂ ರಸ್ತೆಯ ತೇಗೂರು, ನಲ್ಲೂರು ಗೇಟ್ ಬಳಿ ಇರುವ ರೈತ ಸಂಘದ ಕಚೇರಿಯಲ್ಲಿ ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಸಿ ಸುನಿಲ್ ಕುಮಾರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಿಸಾನ್ ವರ್ತಕರ ಸಂಘ, ನೇಚರ್ ಕನ್ಸರ್‌ವೇಟಿವ್ ಟ್ರಸ್ಟ್ ಬಿಕ್ಕಿಮನೆ ಮತ್ತು ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.

ಕಣ್ಣಿನ ಸಮೀಪ ದೃಷ್ಟಿ, ದೂರದೃಷ್ಟಿ, ರೆಟಿನಾ ಆರೋಗ್ಯ ಮತ್ತು ಕಾರ್ನಿಯಾ ಪೊರೆಯ ಆರೋಗ್ಯ, ಕಣ್ಣಿನಲ್ಲಿ ನೀರು ಸುರಿಯುವುದು, ಪಿಸಿರು ಬರುವುದು, ಕಣ್ಣು ಮೊಬ್ಬಾಗಿ ಕಾಣುವುದು ಮುಂತಾದ ಸಮಸ್ಯೆಗಳಿಗೆ ಪರೀಕ್ಷೆ ಮಾಡಿಸಿಕೊಂಡು ಅಂಧತ್ವ ನಿವಾರಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

೪೦ ವರ್ಷ ಮೇಲ್ಪಟ್ಟ ಎಲ್ಲರೂ ತಪ್ಪದೆ ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಈಗಾಗಲೇ ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವವರು ತಪಾಸಣೆ ಮಾಡಿಸಿಕೊಂಡು ಅಗತ್ಯ ಇರುವವರಿಗೆ ಶಸ್ತç ಚಿಕಿತ್ಸೆಯನ್ನು ಮಾಡುವುದಾಗಿ ತಿಳಿಸಿದರು.

ಮದ್ಯಪಾನ ಮತ್ತು ತಂಬಾಕು ಸೇವನೆ ಮಾಡುವವರಲ್ಲಿ ಕಡಿಮೆ ರಕ್ತ ಚಲನೆ, ರಕ್ತನಾಳಗಳು ಸಂಕುಚಿತವಾಗುವ ಸಾಧ್ಯತೆ ಹೆಚ್ಚಾಗಿದ್ದು, ಅಂತಹವರು ಉಡುಪಿಯ ಪ್ರಸಾದ್ ನೇತ್ರಾಲಯದ ವೈದ್ಯರ ತಂಡ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳೊಂದಿಗೆ ಆಗಮಿಸುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸಲಕರಣೆಗಳೊಂದಿಗೆ ಚಿಕ್ಕಮಗಳೂರಿನ ನೇಚರ್ ಕನ್ಸರ್‌ವೇಟಿವ್ ಟ್ರಸ್ಟ್ನ ಅಧ್ಯಕ್ಷರೂ, ದಂತ ವೈದ್ಯರೂ ಆದ ಡಾ. ಕೆ.ಸುಂದರಗೌಡ ಅವರ ತಂಡ ಆಗಮಿಸುತ್ತಿದ್ದು, ಹಲ್ಲಿನ ಆರೋಗ್ಯವನ್ನು ತಪಾಸಣೆ ಮಾಡಿ, ಹಲ್ಲುಗಳ ಸ್ವಚ್ಛತೆ ಮಾಡಿ ಮುಂದೆ ಹುಳುಕು ಹಲ್ಲು ಆಗದಂತೆ ಔಷದೋಪಚಾರ ನೀಡಲಿದೆ ಎಂದು ಹೇಳಿದರು.

ಶಿಬಿರದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಹಾಲಿ ವಾಸದ ವಿಳಾಸದ ದೃಢೀಕರಣ, ಮೊಬೈಲ್ ಸಂಖ್ಯೆ ನೀಡಬೇಕು. ನೇತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಸಾರಿಗೆ ವ್ಯವಸ್ಥೆಯೊಂದಿಗೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆ ನೀಡಿ ಲೆನ್ಸ್ ಅಳವಡಿಸಿ ಶಿಬಿರದ ಸ್ಥಳಕ್ಕೆ ಬಿಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ. ಕೆ. ಸುಂದರಗೌಡ, ಕೆ.ಕೆ ಕೃಷ್ಣೇಗೌಡ, ಆನಂದ್, ಹೊನ್ನೇಗೌಡ, ಚಂದ್ರಶೇಖರ್, ಪುನೀತ್, ನಜ್ಮಾ ಅಲಿ, ಅರುಣಾಕ್ಷಿ, ವೆಂಕಟೇಶ್, ಶ್ರೀಧರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net