

ಬಾಗಲಕೋಟೆ: ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆ.೧೭ ರಂದು ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಬಾಗಲಕೋಟೆ ಉಪವಿಭಾಗಾಕಾರಿ ಶ್ವೇತಾ ಬೀಡಿಕರ್ ಹೇಳಿದರು.
ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜರುಗಿದ ವಿಶ್ವಕರ್ಮ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಕರ್ಮ ಜಯಂತಿಯನ್ನು ಕೂಡ ವಿವಿಧ ಮಹನೀಯರ ಜಯಂತಿ ಆಚರಿಸಿದಂತೆ ಅತ್ಯಂತ ಅದ್ಧೂರಿಯಾಗಿ ಸರ್ಕಾರದ ನಿಯಮಾವಳಿಗಳ ಅನುಸಾರ ಆಚರಿಸಲಾಗುವುದು ಎಂದರು.
ಅಂದು ಬೆಳಗ್ಗೆ ೯.೩೦ ಕ್ಕೆ ಜಿಲ್ಲಾಡಳಿತ ಭವನ ಆವರಣದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ೧೧ ಗಂಟೆಗೆ ನವನಗರದ ಕಲಾ ಭವನದಲ್ಲಿ ಸಂಗೀತ ಮತ್ತು ವಿಶೇಷ ಉಪನ್ಯಾಸದೊಂದಿಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಜನಪ್ರತಿನಿಽ ಹಾಗೂ ಗಣ್ಯಮಾನ್ಯರಿಗೆ ಆಮಂತ್ರಣ ಪತ್ರಿಕೆಗಳನ್ನು ನೀಡಿ ಆಹ್ವಾನಿಸಲಾಗುವುದು ಎಂದು ಹೇಳಿದರು.
ತಾಲೂಕು ಮಟ್ಟದಲ್ಲಿ ಕೂಡ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತಿದ್ದು, ಅಂದು ಶಾಲಾ ಕಾಲೇಜುಗಳಲ್ಲಿ ಕೂಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಿಸುವಂತೆ ಸೂಚನೆ ನೀಡಲಾಗುವುದು. ಸಮುದಾಯ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮ ಸಡಗರದಿಂದ ಭಾಗವಹಿಸಿ ವಿಶ್ವಕರ್ಮ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಜಗನ್ನಾಥಸ್ವಾಮಿ ಮಹಾಪುರುಷ, ಮಳಿಯಪ್ಪ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಇದ್ದರು.