ಸೆ.೧ ರಿಂದ ವುಶು ಕ್ರೀಡಾಕೂಟ

bkt-30-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ವುಶು ಸಂಸ್ಥೆ ಜಿಲ್ಲಾ ಅಧ್ಯಕ್ಷ ರಾಜು ನಾಯ್ಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಅಶೋಕ ಮೊಕಾಶಿ, ಡಾ.ಎಂ.ಆರ್.ಹಿರೇಮಠ, ಸಂಗಮೇಶ ಲಾಯದಗುಂದಿ, ವಿವೇಕಾನಂದ ಗರಸಂಗಿ ಇತರರು ಇದ್ದರು.
Published on

ಬಾಗಲಕೋಟೆ: ಇಲ್ಲಿನ ತೋಟಗಾರಿಕಾ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.೧ ರಿಂದ ೪ ರವರೆಗೆ ರಾಜ್ಯ ವುಶು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ವುಶು ಸಂಸ್ಥೆ ಜಿಲ್ಲಾ ಅಧ್ಯಕ್ಷ ರಾಜು ನಾಯ್ಕರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವುಶು ಸಂಸ್ಥೆ ಹಾಗೂ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವುಶು ಚಾಂಪಿಯನ್ ಶಿಫ್ ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆರು ನೂರಕ್ಕೂ ಅಧಿಕ ವುಶು ಕ್ರೀಡಾಪಟುಗಳು, ತರಬೇತಿದಾರರು, ನಿರ್ಣಾಯಕರು ಭಾಗವಹಿಸಲಿದ್ದಾರೆ ಎಂದರು.

ಬಾಲಕ, ಬಾಲಕಿಯರ ತರಬೇತಿದಾರರು ಹಾಗೂ ನಿರ್ಣಾಯಕರಿಗೆ ಪ್ರತ್ಯೇಕ ಉಚಿತ ವಸತಿ ವ್ಯವಸ್ಥೆ ಹಾಗೂ ಕ್ರೀಡಾಕೂಟ ಆಯೋಜ ನೆಗೆ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯನ್ನು ಮಾಡಲಾಗಿದೆ. ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ನೀಡಿ ಗೌರವಿಸಲಾಗುವುದು. ಹೆಚ್ಚಿನ ಪದಕ ಗಳನ್ನು ಪಡೆದ ವುಶು ತಂಡಗಳಿಗೆ ಚಾಂಪಿಯನ್ ಟೋಫ್ರಿ ನೀಡಲಾಗುವುದು. ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಮುಂಬರುವ ರಾಷ್ಟ್ರೀಯ ವುಶು ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಭಾನುವಾರ ಬೆಳಿಗ್ಗೆ ಆರಂಭಗೊಳ್ಳುವ ಕ್ರೀಡಾಕೂಟ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವುಶು ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಕುಮಾರಸ್ವಾಮಿ ಹಿರೇಮಠ, ರಾಜು ನಾಯ್ಕರ್, ರಮೇಶ ಗಂಜಿಹಾಳ ಭಾಗವಹಿಸುವರು.

ಸೆ.೪ ರಂದು ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾಽಕಾರಿ ಡಾ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಎಂ.ಎನ್.ಪಾಟೀಲ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.

ಮುಖಂಡರಾದ ಅಶೋಕ ಮೊಕಾಶಿ, ಡಾ.ಎಂ.ಆರ್.ಹಿರೇಮಠ, ಸಂಗಮೇಶ ಲಾಯದಗುಂದಿ, ವಿವೇಕಾನಂದ ಗರಸಂಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net