ಸೆ.9ರಂದು ಬೃಹತ್ ಜನತಾ ನ್ಯಾಯಾಲಯ

16-pnp 2 s.mahesh
Published on

ಪಾಂಡವಪುರ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.9ರಂದು ಬೃಹತ್ ಜನತಾ ನ್ಯಾಯಾಲಯ ಆಯೋಜಿಸಲಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಮಾಹಿತಿ ನೀಡಿದರು.


ಜನತಾ ನ್ಯಾಯಾಲಯದಲ್ಲಿ ಚಾಲ್ತಿ ಇರುವ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಇದರಿಂದ ಕಕ್ಷಿದಾರರಿಗೆ ಸಮಯ ಮತ್ತು ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಜತೆಗೆ ಕುಟುಂಬ-ಕುಟುಂಬ ಹಾಗೂ ವ್ಯಕ್ತಿ-ವ್ಯಕ್ತಿಗಳ ನಡುವಿನ ದ್ವೇಷ, ಅಸೂಯೆ ಮರೆಯಾಗಿ ಸಾಮರಸ್ಯ ಮೂಡುತ್ತದೆ. ಹೀಗಾಗಿ ಕಕ್ಷಿದಾರರು ರಾಜಿ ಸಂಧಾನಕ್ಕೆ ಯೋಗ್ಯವಾಗಿರುವ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಳೆದ ಬಾರಿ ಆಯೋಜಿಸಿದ್ದ ಜನತಾ ನ್ಯಾಯಾಲಯದಲ್ಲಿ 2,413 ಚಾಲ್ತಿ ಮತ್ತು ವ್ಯಾಜ್ಯಪೂರ್ವ ಪ್ರಕಣರಗಳು ದಾಖಲಾಗಿದ್ದವು. ಈ ಪೈಕಿ 331 ಪ್ರಕರಣಗಳು ರಾಜಿ ಸಂಧಾನ ಮೂಲಕ ತೀರ್ಮಾನಗೊಂಡಿವೆೆ. ಮೋಟಾರು ವಾಹನ ಅಪರಾಧ(ಎಂವಿಸಿ) ಪ್ರಕರಣಗಳಲ್ಲಿ 88.10 ಲಕ್ಷ ರೂ.ವನ್ನು ಗಾಯಾಳುಗಳಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. ಇದು ದಾಖಲೆಯ ಮೊತ್ತವಾಗಿದೆ. ಈ ಹಿಂದೆ ಇಷ್ಟು ದೊಡ್ಡ ಮಟ್ಟದ ಎಂವಿಸಿ ಪ್ರಕರಣಗಳು ವಿಲೇವಾರಿಯಾಗಿರಲಿಲ್ಲ. ಅದೇ ರೀತಿ 30 ಚೆಕ್‌ಬೌನ್ಸ್ ಪ್ರಕರಣಗಳಿಂದ 49.71 ಲಕ್ಷ ರೂ. ಪರಿಹಾರ ಕೊಡಿಸಕೊಡಲಾಗಿದೆ. ಇದು ಗಣನೀಯ ಸಾಧನೆ ಎಂದರು.


ಹಿರಿಯ ಸಿವಿಲ್ ನ್ಯಾಯಾಧೀಶೆ ಪಾರ್ವತಮ್ಮ ಮಾತನಾಡಿ, ಫೆ.11, 2023ಕ್ಕೆ ಅನ್ವಯಿಸುವಂತೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯಾರ್ಥ ಪಡಿಸಲು ಸೆ.9ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ದಂಡದ ಮೊತ್ತ ಪಾವತಿಸಿ ಪ್ರಕರಣ ಇತ್ಯಾರ್ಥ ಪಡಿಸಿಕೊಳ್ಳಬುಹುದು ಎಂದು ಸಲಹೆ ನೀಡಿದರು.


ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳು ಇತ್ಯಾರ್ಥವಾದರೆ ಎರಡು ಕಡೆಯವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪಾವತಿ ಮಾಡಲಾಗಿದ್ದ ಶುಲ್ಕ ಶೇ.100ರಷ್ಟು ವಾಪಸಾಗುತ್ತದೆ. ವಕೀಲರ ಸಂಘದಿಂದ ಜನತಾ ನ್ಯಾಯಾಲಯಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕನಗನಮರಡಿ ನಾಗರಾಜು, ನ್ಯಾಯಾಲಯದ ಸಿಬ್ಬಂದಿ ಮಂಚಯ್ಯ, ಮನು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net