

ಚಿತ್ರದುರ್ಗ:ಜಿಲ್ಲಾ ಹಾಗೂ ಎಲ್ಲ್ಲ ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸೆಪ್ಟೆಂಬರ್ 9ರಂದು ರಾಷ್ಟ್ರೀಯ ಲೋಕ ಅದಾಲತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಿ ಆಗಬಲ್ಲ ಅಪರಾಧಿಕ ಪ್ರಕರಣ, ಚೆಕ್ ಅಮಾನ್ಯ, ಬ್ಯಾಂಕ್ ವಸೂಲಿ, ಮೋಟಾರು ವಾಹನ ಅಪಘಾತ ಪರಿಹಾರ, ಕಾರ್ಮಿಕ ವಿವಾದ, ವಿದ್ಯುತ್, ನೀರಿನ ಶುಲ್ಕಗಳು, ಆಸ್ತಿ ವಿಭಾಗ, ವೈವಾಹಿಕ, ಭೂಸ್ವಾಧೀನ, ವೇತನ, ಭತ್ಯೆ, ಪಿಂಚಣಿ, ಕಂದಾಯ, ಸಿವಿಲ್ ಮತ್ತು ಇತರ ಪ್ರಕರಣಗಳನ್ನು ಬಗೆಹರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲ 39,731 ಪ್ರಕರಣಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ನ್ಯಾಯಾಲಯಗಳಲ್ಲಿ ನಿತ್ಯ ಉಭಯ ಕಕ್ಷಿದಾರರ ಸಂಧಾನ ಪ್ರಕ್ರಿಯೆ ನಡೆಯಲಿದೆ ಎಂದರು.
ರಾಜಿ ಆದರೆ ಎಲ್ಲರಿಗೂ ನೆಮ್ಮದಿ, ಆರ್ಥಿಕ ಹೊರೆಯೂ ತಪ್ಪುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದಿರುವ ಪ್ರಕರಣಗಳನ್ನೂ ಸಂಧಾನದ ಮೂಲಕ ಬಗೆಹರಿಸಿಕೊಳ್ಳ ಬಹುದಾಗಿದೆ. ಆದಾಲತ್‌ನಲ್ಲಿ ಇತ್ಯರ್ಥವಾದರೆ ನ್ಯಾಯಾಲಯ ಶುಲ್ಕ ಮರುಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದೂರವಾಣಿ ಸಂಖ್ಯೆ 08194-222322 ಸಂಪರ್ಕಿಸಬಹುದು ಎಂದು ಹೇಳಿದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಇದ್ದರು.
(ಸಿಟಿಡಿ 7 ಆದಾಲತ್)
ಚಿತ್ರದುರ್ಗದಲ್ಲಿ ಸೋಮವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಮಾತನಾಡಿದರು. ನ್ಯಾಯಾಧೀಶ ಎಂ.ವಿಜಯ್ ಇದ್ದರು.