ಮೈಸೂರು: ರಾಷ್ಟ್ರೀಯ ಈಡಿಗ ಮಹಾಮಂಡಳಿಯಿಂದ ಸೆ.9 ರಂದು ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ ಆಯೋಜಿಸಲಾಗಿದೆ.
ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗೆ ಸೇರಿರುವ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೂ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿದ್ದೇವೆ ಎಂದು ಮಂಡಳಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ವೈ.ವಸಂತ್‌ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೊಂದು ಪೂರ್ವಭಾವಿ ಸಮಾವೇಶವಾಗಿದೆ. ನಾವೆಲ್ಲರೂ ಸಂಘಟಿತವಾಗಿ ಸಮುದಾಯಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದು, ಮುಂದಿನ ಹೋರಾಟವನ್ನೂ ರೂಪಿಸಲಿದ್ದೇವೆ. ವಿವಿಧ ಬೇಡಿಕೆಗಳಿಗಾಗಿ ಲೋಕಸಭೆ ಮುನ್ನಾ ಶಕ್ತಿ ಪ್ರದರ್ಶಿಸುವ ಸಲುವಾಗಿ ಜನವರಿಯಲ್ಲಿ ಬೆಂಗಳೂರಿನಲ್ಲಿಯೇ ರಾಜ್ಯ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ಮಹದೇವು, ರಾಜ್ಯ ಸಂಘಟನಾ ಕಾರ್ಯದರ್ಶಿ ವಸಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು, ಖಜಾಂಚಿ ಕೃಷ್ಣ, ಸಂಘಟನಾ ಕಾರ್ಯದರ್ಶಿ ಸುರೇಶ್, ಮಡಿವಾಳ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್.ಮಹೇಶ್ ಇತರರು ಇದ್ದರು.