ಸೆ. 6ರಂದು ಮೇಯರ್ ಚುನಾವಣೆ

Published on

ಮೈಸೂರು: ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸೆ. 6ರಂದು ಮಧ್ಯಾಹ್ನ 12 ಗಂಟೆಗೆ ಚುನಾವಣೆ ನಿಗದಿಪಡಿಸಿ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಗುರುವಾರ ಆದೇಶ ಹೊರಡಿಸಿದ್ದಾರೆ.


ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ-ಎ ಮಹಿಳೆಗೆ ಮೀಸಲಾಗಿದ್ದು, ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಇದು ಪಾಲಿಕೆಯ 24ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯಾಗಿದೆ.


ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದೆ ಇರುವ ಕಾರಣ ಮೈತ್ರಿ ಅನಿವಾರ್ಯವಾಗಿದೆ. ಅದರೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಹೀಗಾಗಿ, ಮೈತ್ರಿ ಕುತೂಹಲ ಕೆರಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಮತ್ತೊಂದೆಡೆ, ಬಿಜೆಪಿ ಕಳೆದ ಬಾರಿಯಂತೆ ಈಗಲೂ ಮೇಯರ್ ಸ್ಥಾನ ಪಡೆಯುವ ಆಲೋಚನೆಯಲ್ಲಿ ಇದೆ. ಜೆಡಿಎಸ್ ಈ ಬಾರಿ ಮೇಯರ್ ಸ್ಥಾನ ಪಡೆಯಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಹೀಗಾಗಿ, ಮೈತ್ರಿ ಸಾಧ್ಯತೆ ತೀವ್ರ ಕುತೂಹಲ ಕೆರಳಿಸಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ.


ಮೀಸಲಾತಿ ಪ್ರಕಟಗೊಂಡ ನಂತರ ಮೂರೂ ಪಕ್ಷಗಳ ಸದಸ್ಯರು ವರಿಷ್ಠರನ್ನು ಭೇಟಿಯಾಗಿ ಮೇಯರ್ ಸ್ಥಾನಕ್ಕೋಸ್ಕರ ಲಾಬಿ ನಡೆಸಲು ಪ್ರಾರಂಭಿಸಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲ ಆಕಾಂಕ್ಷಿಗಳ ಮಾಹಿತಿ ಪಡೆದು ವಿವಿಧ ಪಕ್ಷಗಳ ಪ್ರಮುಖರು ಪ್ರತ್ಯೇಕವಾಗಿ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net