ಸೆ.6 ರಂದು ಲೋಕಾರ್ಪಣೆ: ಕೆ.ಎಂ.ಶಿವಲಿಂಗೇಗೌಡ

ಸೆ.6 ರಂದು ಲೋಕಾರ್ಪಣೆ: ಕೆ.ಎಂ.ಶಿವಲಿಂಗೇಗೌಡ
Published on

ಹಾಸನ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ಬಗ್ಗೆ ರಾಜಕೀಯದ ವಿರೋಧಿಗಳಿಂದ ಅಪಪ್ರಚಾರ ನಡುವೆ ಸಮುದ್ರ ಸೇರುತ್ತಿದ್ದ ನೀರನ್ನ ಭಗೀರಥರಂತೆ ತಿರುಗಿಸಿ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕಲ್ಪಿಸಲು ಯೋಜನೆಗೆ ಸೆ.6ರಂದು ಚಾಲನೆಗೊಳಿಸಲಿದೆ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರು ತಿಳಿಸಿದರು.
ಸಿದ್ದರಾಮಯ್ಯ ಅವರು 2014ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ಬಯಲುಸೀಮೆ 7ಜಿಲ್ಲೆಗಳಿಗೆ ನೀರನ್ನು ಪೂರೈಸುವ ಕಾರ್ಯಕ್ಕೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವುದರಿಂದ ನೀರನ್ನು ಎತ್ತುವ ಕಾರ್ಯಕ್ಕೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.6ರಂದು ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆ ಸೇರಿದಂತೆ ಬಯಲು ಸೀಮೆಯ ರಾಜ್ಯದ ಏಳು ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ನಿಜಕ್ಕೂ ಭಗೀರಥ ಪ್ರಯತ್ನ, ಜಿಲ್ಲೆಯಲ್ಲಿ ಮೊದಲು ಹೇಮಾವತಿ ಯೋಜನೆ ಜಾರಿಯಾಗಿತ್ತು. ಅದಾದ ಬಳಿಕ ಜಿಲ್ಲೆಯ ಮಟ್ಟಿಗೆ ಅನುಷ್ಠಾನಗೊಳ್ಳುತ್ತಿರುವ 2ನೇ ಯೋಜನೆ ಬಹುದೊಡ್ಡದು ಎತ್ತಿನಹೊಳೆ ಯೋಜನೆ ಎಂದು ಹೇಳಿದರು.
ಮಳೆಗಾಲ ಸಂದರ್ಭದಲ್ಲಿ ಎತ್ತೇಚ್ಛವಾಗಿ ಹರಿದು ಸಮುದ್ರ ಸೇರುತ್ತಿದ್ದ ನೀರನ್ನು ತಿರುಗಿಸಿ ಬಯಲು ಸೀಮೆಯ ತುಮಕೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಿಗೆ ಜೀವಜಲ ವಾಗಿಸಿರುವುದು ನಮ್ಮ ಸರ್ಕಾರದ ದೊಡ್ಡ ಸಾಧನೆ, ಇದು ರಾಜ್ಯದಲ್ಲೇ ವಿನೂತನ ಯೋಜನೆ ಎಂದು ಹೇಳಿದರು.
ಈ ಯೋಜನೆಯ ಬಗ್ಗೆ ಕೆಲವರು ಈ ಯೋಜನೆ ಹಣವ್ಯರ್ಥ ಮಾಡುವ ಕಾರ್ಯಕ್ರಮ, ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕೆಲವರು ಕೊಂಕು ತೆಗೆದಿದ್ದರು. ಆದರಿಂದು ಯೋಜನೆ ಫಲಪ್ರದ ಆಗಿದೆ.ಸೆ.6 ರಂದು ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಆಗುತ್ತಿದೆ. ಅಂದು ಸಿಎಂ, ಡಿಸಿಎಂ ಹಾಗೂ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಇತ್ತೀಚೇಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗಮಿಸಿ ಪ್ರಾಯೋಗಿಕ ಚಾಲನೆ ನೀಡಿದ್ದಾರೆ. ಒಂದು ವಿಯರ್‌ನಲ್ಲಿ ಚಾಲನೆ ನೀಡಿದ ನಂತರ ಹಳೇಬೀಡು ಕೆರೆ ತುಂಬಿ, ದೇವನೂರು ವರೆಗೂ ನೀರು ಹರಿದು ವೇದಾ ರಿವರ್ ವರೆಗೂ ಹರಿದಿದೆ. ಸೆ.6 ರಂದು ಉಳಿದ 5 ವಿಯರ್‌ಗೆ ನಮ್ಮ ಸರ್ಕಾರ ಚಾಲನೆ ನೀಡಲಿದೆ ಎಂದರು.
ಯೋಜನೆ ಅನುಷ್ಠಾನದಲ್ಲಿ ಸಿಎಂ ಹಣಕಾಸು ನೀಡಿದರೆ, ಡಿಸಿಎಂ ಅವರು ಮುತುವರ್ಜಿವಹಿಸಿ ಶ್ರಮದಿಂದ ಕಾಮಗಾರಿ ಮುಗಿಯಲು ಆಸಕ್ತಿ ವಹಿಸಿದ್ದಾರೆ. ಇದಕ್ಕಾಗಿ ನಮ್ಮ ಜಿಲ್ಲೆಯ ಪರವಾಗಿ ಇಬ್ಬರನ್ನೂ ಅಭಿನಂದಿಸುತ್ತೇವೆ. ಈ ವಿಷಯದಲ್ಲಿ ಟೀಕಾಕಾರರಿಗೆ ನಾವು ಯಾವುದೇ ಉತ್ತರ ನೀಡುವುದಿಲ್ಲ. ಇದೊಂದು ಭಗೀರಥ ಕೆಲಸ, ನಮ್ಮ ಸರ್ಕಾರದ ದೊಡ್ಡ ಯೋಜನೆ ಎಂದಷ್ಟೇ ಹೇಳಿದರು.
ಸಕಲೇಶಪುರ ತಾಲೂಕಿನ ಜನರು ಯೋಜನೆ ವಿಚಾರದಲ್ಲಿ ತ್ಯಾಗ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಸೂಕ್ತ ಪರಿಹಾರ ನೀಡಲಾಗಿದೆ. ಮುಂದೆಯೂ ಅವರ ಪರವಾಗಿ ನಾವು ನಿಲ್ಲುತ್ತೇವೆ. ಯೋಜನೆ ನಮಗೆ ತೃಪ್ತಿ ನೀಡಿದೆ. ಬೇಲೂರು ತಾಲೂಕು ಐದಳ್ಳ ಕಾವಲು ಬಳಿ 5 ಕಿಮೀ ಕಾಮಗಾರಿ ಮುಗಿದರೆ ಮುಂದಿನ ವರ್ಷವೇ ಅರಸೀಕೆರೆ ತಾಲೂಕಿಗೂ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಶಿವಲಿಂಗೇಗೌಡರು ಹೇಳಿದರು.
ಅರಸೀಕೆರೆ, ತುಮಕೂರು ಭಾಗದಲ್ಲೂ ಯಾವುದೇ ರೀತಿಯಲ್ಲೂ ಅಡ್ಡಿಯಿಲ್ಲ. ಗುರುತ್ವಾಕರ್ಷಣೆ ಮೂಲಕ ನೀರು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಬಯಲು ಸೇಮೆಯ 7 ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ. 2027ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧ್ಯಕ್ಷ ಈ.ಎಚ್.ಲಕ್ಷ್ಮಣ್,ಮಾಜಿ ಸಚಿವ ಬಿ.ಶಿವರಾಂ, ಮುಖಂಡರಾದ ದೇವರಾಜೇಗೌಡ, ಮುರಳಿ ಮೋಹನ್, ಬನವಾಸೆ ರಂಗಸ್ವಾಮಿ,ಶ್ರೀಧರ್ ಗೌಡ, ಎಚ್.ಕೆ.ಮಹೇಶ್, ಶಂಕರ್, ಪಟೇಲ್ ಶಿವಪ್ಪ ಇತರರು ಇದ್ದರು.

ಶ್ವೇತಪತ್ರ ಹೊರಡಿಸಲಿ:
ಸಕಲೇಶಪುರಕ್ಕೆ ವಿಶೇಷ ಅನುದಾನ ನೀಡಿಲ್ಲ ಎಂದು ಸ್ಥಳಿಯ ಶಾಸಕ ಸಿಮೆಂಟ್ ಮಂಜು ಮನವಿಗೆ ಪ್ರತಿಕ್ರಿಯಿಸಿ, ಈವರೆಗೂ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಾಗುವುದು ಎಂದರು. ಇದರಲ್ಲಿ ಅನಗತ್ಯ ವಿವಾದ ಬೇಡ. ಸೌಹಾರ್ದ ಯುತವಾಗಿ ಕುಳಿತು ಚರ್ಚಿಸಿ ಪರಸ್ಪರ ಸ್ಪಂದಿಸುವ ಕೆಲಸ ಮಾಡೋಣ ಎಂದು ಹೇಳಿದರು. ಇದೇ ವೇಳೆ ಅರಸೀಕೆರೆ ತಾಲೂಕಿಗೆ ಅನುಕೂಲವಾಗುವ ಭದ್ರ ಮೇಲ್ದಂಡೆ ಯೋಜನೆ ಅನುಷ್ಠಾನ ಸಂಬಂಧ ಬಿಜೆಪಿ, ಕೇಂದ್ರ ಸರ್ಕಾರ ನುಡಿದಂತೆ ನಡೆದಿಲ್ಲ, ಅವರು ಸ್ಪಂದಿಸದೇ ಇದ್ದರೆ ರಾಜ್ಯ ಸರ್ಕಾರದಿಂದಲೇ ಯೋಜನೆ ಆರಂಭಿಸುವುದಾಗಿ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಹಣ ನೀಡಿಲ್ಲ:
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ 5,300 ಕೋಟಿರೂ. ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದರು. ಅದರೆ, ಬೊಮ್ಮಾಯಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರಲಿಲ್ಲ ಮತ್ತು ಇದುವರೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಹೀಗಾಗಿ ಅರಸೀಕೆರೆ ತಾಲ್ಲೂಕು ವ್ಯಾಪ್ತಿಯ 21 ಕೆರೆಗಳಿಗೆ ನೀರು ಹರಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರ ಹಣ ನೀಡಲಿದ್ದಾರೆ ರಾಜ್ಯ ಸರ್ಕಾರವೇ ಆ ಯೋಜನೆಯನ್ನು ಕೈಗೆತ್ತುಕೊಳ್ಳಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net