ಸೆ.3ರಂದು ಶಿವಶರಣ ನುಲಿವ ಚಂದಯ್ಯ ಜಯಂತಿ

13 HANUR 1.
Published on


ಚಾಮರಾಜನಗರ : ಕಾಯಕಯೋಗಿ, ಶಿವಶರಣ ನುಲಿವ ಚಂದಯ್ಯ ಅವರ ಜಯಂತಿಯನ್ನು ಸೆ.3 ರಂದು ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಎಂ.ಆರ್ ಮಂಜುನಾಥ್ ಸೂಚಿಸಿದರು.


ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಭಾನುವಾರ ನುಲಿವ ಚಂದಯ್ಯ ಜಯಂತಿ ಆಚರಣೆ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ನುಲಿವ ಚಂದಯ್ಯ ಸಮಾಜಕ್ಕೆ ಕಾಯಕದ ಮಹತ್ವದ ಸಾರಿದ ಮಹಾನ್ ಶರಣ. ಇವರ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸರ್ಕಾರದ ವತಿಯಿಂದಲೂ ಆಚರಿಸಲಾಗುತ್ತಿದೆ. ಕಳೆದ ವರ್ಷ ಜಿಲ್ಲಾ ಕೇಂದ್ರದಲ್ಲಿ ಇವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಈ ದಿಸೆಯಲ್ಲಿ ಸಮುದಾಯದ ಮುಖಂಡರ ಅಪೇಕ್ಷೆಯಂತೆ ಈ ಬಾರಿ ಹನೂರಿನಲ್ಲೇ ವಿಜೃಂಭಣೆಯಿಂದ ಜಯಂತಿ ಆಚರಿಸುವುದಕ್ಕೆ ತೀರ್ಮಾನಿಸಲಾಗಿದೆ. ಮೆರವಣಿಗೆ, ಸಭೆ ನಡೆಯುವ ಸ್ಥಳ ಸೇರಿದಂತೆ ಇನ್ನಿತರ ಅಗತ್ಯ ರೂಪುರೇಷಗಳನ್ನು ಸಿದ್ಧಪಡಿಸಿಕೊಂಡು ಜಯಂತಿಯನ್ನು ಅಚ್ಚುಕಟ್ಟಾಗಿ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು ಎಂದು ಸೂಚಿಸಿದರು.


ತಹಸೀಲ್ದಾರ್ ಗುರುಪ್ರಸಾದ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುತ್ತೋಲೆಯಂತೆ ಆ.31 ರಂದು ನುಲಿವ ಚಂದಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ಸೆ.3 ರಂದು ನಡೆಯುವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.


ಸಮುದಾಯದ ಮುಖಂಡರು ಮಾತನಾಡಿ, ನಮ್ಮ ಸಮುದಾಯವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡುವುದರ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಜತೆಗೆ ಸಮುದಾಯ ಭವನ ನಿರ್ಮಾಣಕ್ಕೆ 1 ಎಕರೆ ಜಾಗವನ್ನು ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.


ಸಭೆಯಲ್ಲಿ ಆರ್‌ಐ ಮಹದೇವಸ್ವಾಮಿ, ಗ್ರಾಮಲೆಕ್ಕಿಗ ಶೇಷಣ್ಣ, ಕೊರಮ ಸಂಘದ ಜಿಲ್ಲಾಧ್ಯಕ್ಷ ಮಾದೇಶ್, ಮುಖಂಡರಾದ ಪಂಚಾಕ್ಷರಿ, ಶ್ರೀನಿವಾಸ್, ಮಾದೇವ, ದುಂಡಮಾದಶೆಟ್ಟಿ, ರಾಜೇಂದ್ರ, ಮುತ್ತುರಾಜು, ಶಿವರಾಜು, ನಟರಾಜು, ಚನ್ನಯ್ಯ, ಬಸವರಾಜು, ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net