ಸೆ.30ರಿಂದ ಮೂರು ದಿನ ರೈತ ದಸರಾ

Published on

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಆಯೋಜಿಸುವ ರೈತ ದಸರಾ ನಗರದ ಜೆ.ಕೆ.ಮೈದಾನದಲ್ಲಿ ಸೆ.30ರಿಂದ ಅಕ್ಟೋಬರ್ 3ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.
ರೈತ ದಸರಾ ಉಪ ಸಮಿತಿಯ ವಿಶೇಷ ಅಧಿಕಾರಿ ಕೃಷ್ಣಂರಾಜ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತ ಹಾಗೂ ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.
ಮೊದಲ ದಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಎತ್ತಿನ ಗಾಡಿಗಳ ಮೆರವಣೆಗೆ ಸಾಗಲಿದೆ. ಮೆರವಣಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಲಿದ್ದಾರೆ. ಪೂಜಾ ಕುಣಿತ, ಕಂಸಾಳೆ, ಗಾಡಿಗೊಂಬೆ, ನಂದಿಧ್ವಜ, ಡೊಳ್ಳು ಕುಣಿತ, ನಗಾರಿ, ಕರಡಿ ಕುಣಿತ, ಕೊಂಬು ಕಹಳೆಗಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ಇರಲಿದೆ ಎಂದರು.
ಜೆ.ಕೆ.ಮೈದಾನದಲ್ಲಿ ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 10.30ಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸುವರು. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ 30, ಪಶುಪಾಲನಾ ಇಲಾಖೆಯಿಂದ 15 ಮಳಿಗೆಗಳು, ವಿವಿಧ ರೀತಿಯ ಪಶು, ಸಾಕು ಪ್ರಾಣಿಗಳ ಪ್ರದರ್ಶನ, ಮತ್ಸ್ಯಮೇಳ, ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಮೃತ ಸಭಾಂಗಣದಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತರನ್ನು ಸನ್ಮಾನಿಸಲಾಗುತ್ತದೆ. 12.30ಕ್ಕೆ ರೈತರೊಂದಿಗೆ ವಿಚಾರ ವಿನಿಮಯ, ಸಮಗ್ರ ಕೃಷಿ ಪದ್ಧತಿಯಿಂದ ಸ್ವಾವಲಂಬಿ ಕೃಷಿ, ಕೃಷಿಯಲ್ಲಿ ಖುಷಿ ಕಂಡ ರೈತ ದಂಪತಿಗಳು ಕೃಷಿ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಎರಡನೇ ದಿನ ಅ.1ರಂದು ರೈತ ದಸರಾ ಕ್ರೀಡಾಕೂಟ, ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ಗಂಟೆಗೆ ಸಿದ್ದಲಿಂಗಪುರದಲ್ಲಿ ಕೆಸರುಗದ್ದೆ ಓಟ, 10ಗಂಟೆಗೆ ಓವಲ್ ಮೈದಾನದಲ್ಲಿ ಗೋಣಿಚೀಲದೊಳಗೆ ಕಾಲಿಟ್ಟು ಓಡುವುದು, 10.30ಕ್ಕೆ ಓವಲ್ ಮೈದಾನದಲ್ಲಿ ಗೊಬ್ಬರ ಮೂಟೆ ಹೊತ್ತು ಓಡುವುದು, 11ಗಂಟೆಗೆ ಮೂರು ಕಾಲಿನ ಓಟ ನಡೆಯಲಿದೆ ಎಂದು ತಿಳಿಸಿದರು.
ರೈತ ಮಹಿಳೆಯರಿಗಾಗಿ ಬೆಳಗ್ಗೆ 11ಗಂಟೆಗೆ ಸಿದ್ದಲಿಂಗಪುರದಲ್ಲಿ ಕೆಸರುಗದ್ದೆ ಓಟ, 12ಯಿಂದ ಓವಲ್ ಮೈದಾನದಲ್ಲಿ ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿಚೀಲದೊಳಗೆ ಕಾಲಿಟ್ಟು ಓಡುವುದು, ಒಂಟಿಕಾಲಿನ ಓಟ, ಸಂಜೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ, ಬಳಿಕ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಲಿದೆ ಎಂದು ತಿಳಿಸಿದರು.
ಮೂರನೇ ದಿನ ಅ.3ರಂದು ಮೈಸೂರು ವಿವಿ ಹಾಕಿ ಮೈದಾನದಲ್ಲಿ ಮುದ್ದುಪ್ರಾಣಿಗಳ ಪ್ರದರ್ಶನ ಸ್ಪರ್ಧೆ ನಡೆಯಲಿದೆ. 10 ಗಂಟೆಗೆ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದು, ಸಂಜೆ 5.30ಕ್ಕೆ ಜೆ.ಕೆ.ಮೈದಾನದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ.ಚೌವ್ಹಾಣ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರೈತ ದಸರಾಕ್ಕೂ ಮುನ್ನಾ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸೆ.26ರಿಂದ 30ರ ವರೆಗೆ ತಾಲೂಕು ಮಟ್ಟದ ಗ್ರಾಮೀಣ ದಸರಾ ಆಯೋಜಿಸಲಾಗುವುದು. ಇದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ಮಾಡಿಕೊಳ್ಳಬೇಕು. ಇಲ್ಲಿ ವಿಜೇತರಾದವರನ್ನು ಜಿಲ್ಲಾಮಟ್ಟಕ್ಕೆ ಕಳುಹಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net