

ಮೈಸೂರು: ಭಾರತ್ ಜೋಡೋ ಯಾತ್ರೆ ನೇತೃತ್ವ ವಹಿಸಿರುವ ಕಾಂಗ್ರೆಸ್‌ನ ಮುಖಂಡ ರಾಹುಲ್‌ಗಾಂಧಿ ನಂಜನಗೂಡು ತಾಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.
ಸೆ.18ರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಭಾರತ್ ಜೋಡೋ ಯಾತ್ರೆ ಕುರಿತು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಕಾಂಗ್ರೆಸ್‌ನ ಈ ಯಾತ್ರೆ ಸೆ.30ರಂದು ಚಾಮರಾಜನಗರ ಮೂಲಕ ಕರ್ನಾಟಕ ಪ್ರವೇಶಿಸಲಿದೆ. ಗುಂಡ್ಲುಪೇಟೆ ತಾಲೂಕಿನ ಗುಂಡ್ಲೂರು ಗ್ರಾಮದಲ್ಲಿ ರಾಹುಲ್‌ಗಾಂಧಿ ಅವರನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಪಾದಯಾತ್ರೆ ನಡೆಸಿ ಬೇಗೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮಾಹಿತಿ ನೀಡಿದರು.
ನಿತ್ಯ ಬೆಳಗ್ಗೆ 7ಕ್ಕೆ ಪಾದಯಾತ್ರೆ ಶುರು ಮಾಡುವ ರಾಹುಲ್ ಊಟದ ಸಮಯದಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಬುಡಕಟ್ಟು ಸಮುದಾಯದ ಜೇನುಕುರುಬ, ಸೋಲಿಗರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಕರೊನಾ ಸಂದರ್ಭದಲ್ಲಿ ಆಮ್ಲಜನಕ ಸಿಗದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸೆ.1ರಂದು ಬೇಗೂರು ಮೂಲಕ ಮೈಸೂರು ಜಿಲ್ಲೆ ಪ್ರವೇಶ ಮಾಡಿ ಕಳಲೆ ಗ್ರಾಮದ ವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಅಲ್ಲೇ ಸಂವಾದದಲ್ಲಿ ಎಂ-ನರೇಗಾ ಫಲಾನುಭವಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಸಾಗಿ ತಾಂಡವಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು.
ಸೆ.2ರಂದು ಗಾಂಧಿ ಜಯಂತಿ ಅಂಗವಾಗಿ ನಂಜನಗೂಡು ತಾಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಕಡಕೊಳದಿಂದ ಮೈಸೂರಿನ ವರೆಗೆ ಪಾದಯಾತ್ರೆ ಜರುಗಲಿದೆ. ನಗರದ ದೊಡ್ಡಕೇರಿ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರು ದಿನ ಸೆ.3ರಂದು ಮೈಸೂರಿನಿಂದ ಪಾದಯಾತ್ರೆ ಮೂಲಕ ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.
ಎಚ್ಚರಿಕೆ ವಹಿಸಿ:
ಸಂವಾದದಲ್ಲಿ ಅನಗತ್ಯ ವ್ಯಕ್ತಿಗಳು ಪ್ರವೇಶ ಮಾಡಿ ಮುಜುಗರದ ಪ್ರಶ್ನೆ ಕೇಳುವುದಕ್ಕೆ ಅವಕಾಶ ನೀಡಬಾರದು. ಬಿಜೆಪಿ, ಆರ್‌ಎಸ್‌ಎಸ್‌ನವರು ತರಬೇತಿಗೊಳಿಸಿ, ಇಂತಹ ವ್ಯಕ್ತಿಗಳನ್ನು ಕಳುಹಿಸುವ ಸಾಧ್ಯತೆ ಇರುತ್ತದೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಧ್ರುವನಾರಾಯಣ ಹೇಳಿದರು.
ಪಾದಯಾತ್ರೆಯಲ್ಲಿ ಪ್ರತಿ ದಿನ 10 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಸೇರಿದಂತೆ 220 ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಜಿಲ್ಲೆಗೆ ಭೇಟಿ ನೀಡುವ ರಾಹುಲ್‌ಗಾಂಧಿ ಅವರೊಂದಿಗೆ ನಿತ್ಯ 2 ಸಾವಿರ ಮೈಸೂರಿನ ಕಾರ್ಯಕರ್ತರು ಹೆಜ್ಜೆ ಹಾಕಬೇಕು. ಜತೆಗೆ, ಸೋಲಿಗರ ಕೊರವ ಕುಣಿತದಂತಹ ಜಿಲ್ಲೆಯ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ರಾಹುಲ್‌ಗಾಂಧಿ ಅವರನ್ನು ಬರಮಾಡಿಕೊಳ್ಳಬೇಕು. ಇದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು ಎಂದು ಧ್ರುವನಾರಾಯಣ ಸೂಚಿಸಿದರು.
ಅದ್ದೂರಿತನ ಬೇಡ. ಇದಕ್ಕೆ ಅವಕಾಶ ನೀಡಬೇಡಿ. ಸಾಂಪ್ರದಾಯಿಕವಾಗಿ ಸರಳವಾಗಿ ಸ್ವಾಗತ ಕಾರ್ಯಕ್ರಮ ಇರಲಿದೆ ಎಂದು ಮುಖಂಡರಿಗೆ ಕಿವಿಮಾತು ಹೇಳಿದರು. ಸೆಲ್ಫಿ ಕಾಟ ಹೆಚ್ಚಾಗಿದೆ. ಇದಕ್ಕಾಗಿ ಕಾರ್ಯಕರ್ತರು ನಾಯಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಾರೆ. ರಾಹುಲ್‌ಗಾಂಧಿ ಬಂದಾಗ ಇದಕ್ಕೆ ಅವಕಾಶ ನೀಡಬೇಡಿ. ಸಹಕಾರ ನೀಡಿ ಅವರೊಂದಿಗೆ ಹೆಜ್ಜೆ ಹಾಕಿ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ಭಾರತ್ ಜೋಡೋ ಯಾತ್ರೆ ಆಗಮನ ಮೈಸೂರಿನ ಕಾರ್ಯಕರ್ತರ ಪಾಲಿಗೆ ಅವಿಸ್ಮರಣೀಯವಾಗಲಿದೆ. ಇದು ಸ್ಥಳೀಯ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಬೋನಸ್ ಆಗಲಿದೆ. ಆದ್ದರಿಂದ ಶಿಸ್ತು ಮತ್ತು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಫ್ಲೆಕ್ಸ್ ಬಳಕೆಯಲ್ಲಿ ಇತಿಮಿತಿ ಇರಲಿ. ಮೈಸೂರಿನ ಸೌಂದರ್ಯವನ್ನು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಶಾಸಕರಾದ ವಾಸು, ಕಳಲೆ ಕೇಶವಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರು ಪಾಲ್ಗೊಂಡಿದ್ದರು