ಸೆ.26 ರಿಂದ ಸುವರ್ಣ ಸಂಪೂರ್ತಿ ಸಂಭ್ರಮ:ಶ್ರೀ ಶಂಭುನಾಥ ಸ್ವಾಮೀಜಿ

ಸೆ.26 ರಿಂದ ಸುವರ್ಣ ಸಂಪೂರ್ತಿ ಸಂಭ್ರಮ:ಶ್ರೀ ಶಂಭುನಾಥ ಸ್ವಾಮೀಜಿ
Published on

ಹಾಸನ: ಪರಮಪೂಜ್ಯ ಜಗದ್ಗುರು, ಪದ್ಮಭೂಷಣ, ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವದ ಸವಿನೆನಪಿಗಾಗಿ ಸೆ.26 ರಿಂದ 28 ರವರೆಗೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಹಾಸನದ ಆದಿ ಚುಂಚನಗಿರಿ ಮಠದಲ್ಲಿ ಸೆ.26 ರಂದು ಬೆಳಗ್ಗೆ 10.30ಕ್ಕೆ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮದ ಉದ್ಘಾಟನೆ ಮತ್ತು ರಜತ ತುಲಾಭಾರ ಕಾರ್ಯಕ್ರಮ ಜರುಗಲಿದೆ. ಸಂಜೆ 5.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸೆ.27 ರಂದು ಬೆಳಗ್ಗೆ 10ಕ್ಕೆ ಶ್ರೀಮಠದ ಹಿರಿಯ 50 ಸದ್ಭಕ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಹಾಸನ, ತಮಿಳುನಾಡು, ಚಿಕ್ಕಮಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಸಾಧಕರನ್ನು ಅಭಿನಂದಿಸಲಾಗುತ್ತಿದೆ ಎಂದು ಸೋಮಾವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಧ್ಯಾಹ್ನ 3 ಗಂಟೆಗೆ ಭೈರವೈಕ್ಯ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರ ಪುತ್ಥಳಿಯೊಂದಿಗೆ ನಗರದ ಕಲಾಭವನದಿಂದ ಶ್ರೀ ಮಠದವರೆಗೆ 50 ಜಾನಪದ ಕಲಾ ತಂಡಗಳ ಜೊತೆಯಲ್ಲಿ ಬೃಹತ್ ಮೆರವಣಿಗೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು. ಚಿಕ್ಕಮಗಳೂರು, ಮಂಡ್ಯ, ಮೈಸೂರು, ಮಡಿಕೇರಿ ಜಿಲ್ಲೆಗಳಿಂದ ವಿವಿಧ ಕಲಾತಂಡಗಳು ಆಗಮಿಸಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ ಎಂದು ಹೇಳಿದರು.
ಸೆ.28 ರಂದು ಸಂಜೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಧರ್ಮಗುರುಗಳು ಭಾಗಿಯಾಗಲಿದ್ದಾರೆ. ಶ್ರದ್ಧೆ, ಭಕ್ತಿಯಿಂದ ಮೂರು ದಿನಗಳ ಕಾರ್ಯಕ್ರಮ ಆಚರಿಸಲು ಎಲ್ಲಾ ತಯಾರಿ ನಡೆದಿದೆ.ಶ್ರೀ ಮಠದ ಸದ್ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ನಾಥ ಪರಂಪರೆಯ ಶ್ರೀ ಮಠದ 71 ನೇ ಪೀಠಾಧ್ಯಕ್ಷರಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು 1974 ರಲ್ಲಿ ಅಧಿಕಾರ ವಹಿಸಿಕೊಂಡರು. ಮಹಾಗುರುಗಳು ಪೀಠಾಧ್ಯಕ್ಷರಾಗಿ 50 ವರ್ಷ ತುಂಬಿದ ಹಿನ್ನೆಲೆ ಕಳೆದ ವರ್ಷವೂ ಸುವರ್ಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಮಪೂಜ್ಯರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿತ್ತು. ಇಂದು ಅವರ ಸ್ಮರಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net