ಸೆ.26 ರಿಂದ ಬೇಲೂರಿನಲ್ಲಿ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ಧರ್ಮ ಸಮ್ಮೇಳನ

SHRI RAMBHAPURI JAGADGURUGALU IN DASARA (3)
Published on

ಹಾಸನ: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಬೇಲೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೆ.26 ರಿಂದ ಅ.5 ರವರೆಗೆ ನಡೆಯಲಿದೆ ಎಂದು ಸಮ್ಮೇಳನ ಜಿಲ್ಲಾ ಸಮಿತಿ ಅಧ್ಯಕ್ಷ ಸಂಗಮ್ ತಿಳಿಸಿದರು.

ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಈ ಧರ್ಮಸಮ್ಮೇಳನ ನಡೆಸುವ ಅವಕಾಶ ಈ ಬಾರಿ ನಮ್ಮ ಜಿಲ್ಲೆಯ ಬೇಲೂರು ತಾಲೂಕಿಗೆ ಲಭಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೆ.25 ರಂದು ಸಂಜೆ 5 ಗಂಟೆಗೆ ಅಲಂಕೃತ ಸಾರೋಟಿನಲ್ಲಿ ರಂಭಾಪುರಿ ಶ್ರೀಗಳು ಬೇಲೂರು ಪುರಪ್ರವೇಶ ಮಾಡಲಿದ್ದಾರೆ. ಸೆ.26 ರಂದು ಬೆಳಗ್ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸಮುದಯ ಭವನದಲ್ಲಿ ಗುರುಗಳು ಇಷ್ಟಲಿಂಗ ಪೂಜೆ ಮತ್ತಿತರ ಧಾರ್ಮಿಕ ವಿಧಿಗಳನ್ನು ನೆರವೇರಿಸುವರು. ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧರ್ಮ ಸಮ್ಮೇಳನ ಉದ್ಘಾಟಿಸುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ‘ಶ್ರೀ ಸೋಮೇಶ್ವರ ಸಂದೇಶಾಮೃತ’ ಕೃತಿ ಬಿಡುಗಡೆ ಮಾಡುವರು. ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರು ‘ಭಾವತರಂಗ’ ಕೃತಿ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮತ್ತಿತರ ಗಣ್ಯರು, ವಿವಿಧ ಮಠಾಧೀಶರು ಭಾಗವಹಿಸುವರು ಎಂದು ವಿವರ ನೀಡಿದರು.

ಪ್ರತಿದಿನ ಸಂಜೆ 7 ಗಂಟೆಯಿಂದ ಧರ್ಮ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. ಕೇಂದ್ರ ಸಚಿವರು ಸೇರಿದಂತೆ ರಾಜ್ಯ ಸರ್ಕಾರದ ಸಚಿವರು, ವಿವಿಧ ಭಾಗಗಳಿಂದ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸುವರು. ಸೆ.28 ರಂದು ಅಖಿಲ ಭಾರತ ವೀರಶೈವ ವೇದಿಕೆ ಅಧ್ಯಕ್ಷ ಜಯಂತ್ ಕುಮಾರ್ ಅವರಿಗೆ ರಂಭಾಪುರಿ ಯವಸಿರಿ ಪ್ರಶಸ್ತಿ, ಸೆ.30 ರಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ಶ್ರೀ ವಾಮದೇವ ಮಹಂತ ಶಿವಾಚಾರ್ಯ ಸ್ವಾಮೀಜಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಅ.1 ರಂದು ಹಾಸನ ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡರಿಗೆ ವೀರಶೈವ ಸಿರಿ ಪ್ರಶಸ್ತಿ, ಅ.2 ರಂದು ಹೆಚ್ಚುವರಿ ಕೃಷಿ ನಿರ್ದೇಶಕ ಎಂ.ಎಸ್. ದಿವಾಕರ ಅವರಿಗೆ ಸಾಧನ ಸಿರಿ ಪ್ರಶಸ್ತಿ ಮತ್ತು ಅ.3 ರಂದು ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಶಿವಾಚಾರ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಅ.3 ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ‘2023ನೇ ವರ್ಷದ ದಿನದರ್ಶಿಕೆ’ ಬಿಡುಗಡೆ ಮಾಡುವರು. ಅ.4 ರಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ‘ರಂಭಾಪುರಿ ಬೆಡಗು’ ಕೃತಿ ಬಿಡುಗಡೆ ಮಾಡುವರು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ‘ಶ್ರೀಪೀಠದ ದಾಖಲೆ ಸಂಪುಟ’ ಬಿಡುಗಡೆ ಮಾಡುವರು.

ಅ.5 ರಂದು ಸಂಜೆ 4.30 ಕ್ಕೆ ವಿಜಯದಶಮಿ ಶಮೀ ಸೀಮೋಲಂಘನ ಕಾರ್ಯಕ್ರಮ ನಡೆಯುವುದು. ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರಿ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಗುವುದು ಎಂದು ಹೇಳಿದರು.

ಲಕ್ಷಾಂತರ ಭಕ್ತರ ನಿರೀಕ್ಷೆ:

ಕೋವಿಡ್ ಸಾಂಕ್ರಾಮಿಕದ ಕಾರಣ ಎರಡು ವರ್ಷಗಳ ನಂತರ ರಂಭಾಪುರಿ ಶ್ರೀಗಳ ಧರ್ಮ ಸಮ್ಮೇಳನ ನಡೆಯುತ್ತಿದೆ. ಅಲ್ಲದೆ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಬೇಲೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳಗ್ಗೆ ದರ್ಶನಾವಕಾಶ:

ಬೇಲೂರಿನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ರಂಭಾಪುರಿ ಶ್ರೀಗಳು ವಾಸ್ತವ್ಯ ಹೂಡುವರು. ನಿತ್ಯ ಬೆಳಗ್ಗೆ 8 ಗಂಟೆಗೆ ಇಷ್ಟಲಿಂಗ ಮಹಾಪೂಜೆ ನಡೆದ ನಂತರ ಭಕ್ತರು ದರ್ಶನಾಶೀರ್ವಾದ ಪಡೆಯಲು ಅವಕಾಶ ಇದೆ. ಆದರೆ ಸಂಜೆ ವೇದಿಕೆಯಲ್ಲಿ ದರ್ಶನ ಮತ್ತು ಮಾಲಾರ್ಪಣೆಗೆ ಅವಕಾಶ ಇರುವುದಿಲ್ಲ. ನಿತ್ಯ ಸಮಾರಂಭದ ಕೊನೆಯಲ್ಲಿ ಶಿವಾಚಾರ್ಯರು ಮತ್ತು ಧರ್ಮಾಭಿಮಾನಿಗಳಿಂದ ನಜರ್ (ಗೌರವ) ಸಮರ್ಪಣೆ ನಡೆಯುವುದು. ವಿಜಯದಶಮಿ ದಿನ ವಿಷ್ಣುಸಮುದ್ರ ಕಲ್ಯಾಣಿಯಿಂದ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸ್ವತಃ ಅಗ್ರೋದಕ ಹೊತ್ತು ಪೂಜೆ ನಡೆಸುವರು ಎಂದು ತಿಳಿಸಿದರು.

ಕೃಷಿ ವಸ್ತು ಪ್ರದರ್ಶನ:

ಧರ್ಮಸಮ್ಮೇಳನದ ಜೊತೆಯಲ್ಲಿ ಸೆ.26 ರಿಂದ ಅ.5 ರವರೆಗೆ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಅತ್ಯಾಧುನಿಕ ಕೃಷಿ, ಸಾವಯವ ಕೃಷಿ ಕುರಿತ ಮಾಹಿತಿ, ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಇರುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಗಮ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಧರ್ಮ ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ದಿಲೀಪ್ ಹಗರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net