

ವಿರಾಜಪೇಟೆ: ವಿರಾಜಪೇಟೆ ಕೊಡವ ಸಮಾಜ 100 ವಸಂತಗಳನ್ನು ಕಂಡಿದ್ದು ಅದರ ನೆನಪಿಗಾಗಿ ಸೆ.26 ರಂದು ವಿರಾಜಪೇಟೆ ಕೊಡವ ಸಮಾಜದಲ್ಲಿ ನೂರಾಂಡ ನಮ್ಮೆ ಆಚರಿಸಲಾಗುವುದು ಎಂದು ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ಹೇಳಿದರು.
ನಮ್ಮ ಆಡಳಿತ ಮಂಡಳಿ ಉದಯವಾಗಿ ಒಂದು ವರ್ಷ ಕಳೆದಿದೆ. 1921ರಲ್ಲಿ ಅಸ್ತಿತ್ವಕ್ಕೆ ಬಂದ ವಿರಾಜಪೇಟೆ ಕೊಡವ ಸಮಾಜ ಹಲವಾರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. 2250 ಸದಸ್ಯರನ್ನು ಹೊಂದಿದೆ. ಪ್ರಕೃತಿ ವಿಕೋಪ ಹಾಗೂ ಕೋವಿಡ್ ಇದ್ದ ಕಾರಣ ನೂರಾಂಡ್‌ನಮ್ಮೆ ನಡೆಸಲು ಸಾದ್ಯವಾಗಿಲ್ಲ. ಈ ಬಾರಿ ನೂರಾಂಡ ನಮ್ಮೆಯನ್ನು ನಡೆಸಲು ನಿರ್ಧರಿಸಿದ್ದು, ಈಗಾಗಲೇ ಅದರ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಅಂದಿನ ಸಭೆಯಲ್ಲಿ ಕೊಡವ ಸಮಾಜಕ್ಕಾಗಿ ದುಡಿದ ಹಿರಿಯ ಚೇತನಗಳು, ಮಹನಿಯರು ಹಾಗೂ ದಾನಿಗಳನ್ನು, ಕರ್ನಾಟಕ ಸರ್ಕಾರ ನೀಡಿದ ಸಹಾಯವನ್ನು ಸ್ಮರಿಸಲಾಗುವುದು. ಕೊಡವ ಸಮಾಜದ ಅಧೀನದಲ್ಲಿ ತ್ರೀವೇಣಿ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು ಎಲ್‌ಕೆಜಿ ಯಿಂದ 10ನೇ ತರಗತಿವೆರಗೆ 350 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100ರ ಫಲಿತಾಂಶ ಪಡೆಯುತ್ತಿದೆ. ಹೊಸ ಪ್ರವೇಶಾತಿ ಪ್ರಾರಂಭಗೊಂಡಿದೆ. ಗ್ರಾಮೀಣ ಮಟ್ಟದಲ್ಲೂ ಶಾಲಾ ವಾಹನದ ವ್ಯವಸ್ಥೆ ಮಾಡಲಾಗಿದ್ದು ಮೂಲಸೌಕರ್ಯ ಒದಗಿಸಲಾಗಿದೆ. ಶಾಲೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಉಪಾಧ್ಯಕ್ಷ ಕುಯಿಮಂಡ ಕಿರಣ್, ಮರಣನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿಪೂಣಚ್ಚ, ಕ್ರೀಡಾ ಕಾರ್ಯದರ್ಶೀ ಅಮ್ಮಣಿಚಂಡ ಸುಬ್ರಮಣಿ, ನಿದೇರ್ಶಕರುಗಳಾದ ಚೇಮಿರ ಅರ್ಜುನಾ, ಬಾಚಿರ ಜಗದೀಶ್, ತಾತಂಡ ಕಬೀರ್ ಗಣಪತಿ ಉಪಸ್ಥಿತರಿದ್ದರು.