

ಹನೂರು: ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮುಂದೂಡಲ್ಪಟ್ಟಿದ್ದ ಉಚಿತ ಸಾಮೂಹಿಕ ವಿವಾಹ ಕೊನೆಗೂ ಸೆಪ್ಟಂಬರ್ 25ಕ್ಕೆ ಫಿಕ್ಸ್ ಆಗಿದೆ.
ಪ್ರಾಧಿಕಾರ ವತಿಯಿಂದ ಆ.23 ರಂದು ಸಾಮೂಹಿಕ ವಿವಾಹವನ್ನು ನಿಗದಿ ಪಡಿಸಲಾಗಿತ್ತು. ಆದರೆ ಕಾರಣಾಂತರದಿಂದ 28ಕ್ಕೆ ನಿಗದಿಪಡಿಸಿ ಮುಂದೂಡಲಾಗಿತ್ತು. ಈ ವೇಳೆಗೆ 65 ಜೋಡಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಪ್ರಾಧಿಕಾರದಿಂದ ಮುಂದೂಡಲ್ಪಟ್ಟ ಮದುವೆಗೆ ಖಚಿತಪಡಿಸಿರಲಿಲ್ಲ. ಇದರಿಂದ ಗೊಂದಲಕ್ಕೆ ಸಿಲುಕಿ ನೆಂಟರಿಷ್ಟರಿಗೆ ತಿಳಿಸಲು ಪೇಚಿಗೀಡಾಗಿದ್ದ 7 ಜೋಡಿ ಭಾನುವಾರ ಮ.ಬೆಟ್ಟದ ಸಾಲೂರು ಬೃಹನ್ಮಠ ಹಾಗೂ ಒಂದು ಜೋಡಿ ಬೊಮ್ಮೇಶ್ವರ ದೇಗುಲದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸ್ವಂತ ಖರ್ಚಿನಲ್ಲಿ ವಿವಾಹವಾಗಿತ್ತು. ಈ ನಡುವೆ ಸಾಮೂಹಿಕ ವಿವಾಹದ ದಿನಾಂಕವನ್ನು ನಿಗದಿಪಡಿಸಿ ಖಚಿತಪಡಿಸುವಂತೆ ಅರ್ಜಿ ಸಲ್ಲಿಸಿದ್ದವರಿಂದ ತೀವ್ರ ಒತ್ತಾಯ ಕೇಳಿಬಂದಿತ್ತು. ಕೆಲವರು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಸಲುವಾಗಿ ಕಾಲಾವಕಾಶವನ್ನು ಕೇಳಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಧಿಕಾರದ ಉಪಾಧ್ಯಕ್ಷ ಕೆ. ವೆಂಕಟೇಶ್ ಅವರನ್ನು ಭೇಟಿಯಾಗಿ ಚರ್ಚಿಸಿ ಸೆ.25ರಂದು ಸಾಮೂಹಿಕ ವಿವಾಹವನ್ನು ನಿಗದಿಪಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ.
ಸಾಮೂಹಿಕ ವಿವಾಹ ಸಂಬಂಧ ವಿಜಯವಾಣಿಯಲ್ಲಿ ಆ.28ರಂದು ಗೊಂದಲಕ್ಕೆ ಸಿಲುಕಿದ ವಧು- ವರರು ಹಾಗೂ 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಳು ಜೋಡಿ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ವಿಜಯವಾಣಿಯೊಂದಿಗೆ ಮಾತನಾಡಿ, ಸಾಮೂಹಿಕ ವಿವಾಹಕ್ಕೆ 100ಕ್ಕೂ ಹೆಚ್ಚು ಅರ್ಜಿಗಳು ವಿತರಣೆಯಾಗಿದ್ದು, ಈಗಾಗಲೇ 65 ಅರ್ಜಿಗಳು ಸಲ್ಲಿಕೆಯಾಗಿದೆ. ಕಳೆದ ಸಾಲಿನಲ್ಲಿ ವಧುವಿಗೆ 2ಗ್ರಾಂ ತೂಕದ ಚಿನ್ನದ ತಾಳಿಯನ್ನು ನೀಡಲಾಗಿತ್ತು. ಆದರೆ ಹೆಚ್ಚು ದಿನಗಳ ಬಾಳಿಕೆ ಬಾರದಿರುವುದನ್ನು ಮನಗಂಡು 4 ಗ್ರಾಂ ತೂಕದ ತಾಳಿಯನ್ನು ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು, ಸೆ.25 ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದರು.
ಹುಂಡಿ ಎಣಿಕೆ ಮುಂದೂಡಿಕೆ: ಹುಂಡಿ ಎಣಿಕೆ ಕಾರ್ಯವನ್ನು ಆ.30 ರಂದು ನಿಗದಿ ಪಡಿಸಲಾಗಿತ್ತು. ಆದರೆ ಈ ದಿನದಂದು ಮೈಸೂರಿನಲ್ಲಿ ನಡೆಯುವ ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮಕ್ಕೆ ನನ್ನನ್ನು ನಿಯೋಜಿಸಲಾಗಿದೆ. ಆದ್ದರಿಂದ ಸೆ.1 ರಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರಿಗೆ ತಿಳಿಸಲಾಗಿದೆ ಎಂದು ಸರಸ್ವತಿ ಹೇಳಿದರು.