ಸೆ.24 ರಿಂದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ

ಸೆ.24 ರಿಂದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ
Published on

ಹಾಸನ: ಉಪ ನಿರ್ದೇಶಕರ ಕಚೇರಿ,ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ ಹಾಸನ) ಹಾಗೂ ನಗರದ ಬಿ.ಕಾಟೀಹಳ್ಳಿಯ ಎಪಿಜೆ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಸೆ.24 ರಿಂದ 2 ದಿನಗಳ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಪಿಯು ಡಿಡಿ ಸಿ.ಎಂ.ಮಹಾಲಿಂಗಯ್ಯ ತಿಳಿಸಿದರು.
ರಾಜ್ಯಮಟ್ಟಕ್ಕೆ ಬಲಿಷ್ಠ ತಂಡ ಕಟ್ಟಬೇಕೆಂಬ ಉದ್ದೇಶದಿಂದ ಈ ಕ್ರೀಡಾಕೂಟ ನಡೆಸಲಾಗುತ್ತಿದೆ. ಅಲ್ಲಿಂದ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಬೇಕು ಎಂಬುದು ನಮ್ಮ ಆಶಯ,ಕಳೆದ ವರ್ಷ 28 ಮಕ್ಕಳು ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಮಕ್ಕಳು ಆಯ್ಕೆಯಾಗಬೇಕು ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ, ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಂಘದ ಸಹಯೋಗದೊಂದಿಗೆ ಕ್ರೀಡಾಕೂಟ ನಡೆಸಲಾಗುತ್ತಿದೆ. ಎಪಿಜೆ ಪಿಯು ಕಾಲೇಜು ಇದರ ನೇತೃತ್ವ ವಹಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಪಿಜೆ ಕಾಲೇಜು ಸಂಸ್ಥಾಪಕ ಡಿ.ಮುರುಳಿ ಮಾತನಾಡಿ, ಸೆ.24 ರಂದು ಬೆಳಗ್ಗೆ 8.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಉದ್ಘಾಟನೆ ನೆರವೇರಿಸುವರು. ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಎೆಚ್.ಡಿ.ದೇವೇಗೌಡರು ಘನ ಉಪಸ್ಥಿತಿ ಇರುವರು ಎಂದರು.
ಅರಸೀಕೆರೆ ಶಾಸಕರು ಹಾಗೂ ಕೆಹೆಚ್‌ಬಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡರು ಗೌರವ ಉಪಸ್ಥಿತಿ ಇರುವರು. ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಸಂಸದ ಶ್ರೇಯಸ್ ಪಟೇಲ್ ಧ್ವಜಾರೋಹಣ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಡಾ.ಬಿ.ಆರ್.ಪೂರ್ಣಿಮಾ, ಎಸ್ಪಿ ಮೊಹಮದ್ ಸುಜೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್ ಮೊದಲಾದವರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಆರಂಭದ ದಿನ ಬೆಳಗ್ಗೆ 6.30ಕ್ಕೆ ಗುಡ್ಡಗಾಡು ಓಟ ಸ್ಪರ್ಧೆ ಇದೆ. ಬಳಿಕ ಕಾಲೇಜು ಆವರಣದಲ್ಲಿ ಕರಾಟೆ, ಕುಸ್ತಿ ಮೊದಲಾದ ಸ್ಪರ್ಧೆ ನಡೆಯಲಿವೆ.ಎರಡು ದಿನಗಳ ಕಾಲ ಬಾಲ್ ಬ್ಯಾಡ್ಮಿಂಟನ್, ಶೆಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್, ಖೋಖೋ, ಕಬಡ್ಡಿ,ಓಟದ ಸ್ಪರ್ಧೆ, ಎತ್ತರ ಜಿಗಿತ, ಗುಂಡು ಎಸೆತ, ಸೇರಿ 60ಕ್ಕೂ ಹೆಚ್ಚು ಕ್ರೀಡೆಗಳು ನಡೆಯಲಿವೆ. 8 ತಾಲೂಕುಗಳಿಂದ ಅಂದಾಜು 2.500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ರಾಮಣ್ಣ, ಸುರೇಶ್, ದೇವರಾಜ್, ವಿಜಯಕುಮಾರ್ ಸುದ್ದಿಗೋಷ್ಟಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net