ಮೈಸೂರು: ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಂಗಳೂರಿನ ಅಭಿನವ ಸಂಸ್ಥೆಯಿಂದ ಸೆ. 22ರಂದು ‘ಪ್ರೊ.ಜಿ.ಎಚ್.ನಾಯಕ-88’ ನೆನಪಿನಲ್ಲಿ ಕನ್ನಡ ಸಾಹಿತ್ಯ ಮತ್ತು ಜೀವನ ಮೌಲ್ಯಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ತಿಳಿಸಿದರು.
ಮಹಾಜನ ವಿದ್ಯಾಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ಅಂದು ಬೆಳಗ್ಗೆ 10ಕ್ಕೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಚಾಲನೆ ನೀಡಲಿದ್ದಾರೆ. ನುಡಿ ಹೊತ್ತಗೆಯನ್ನು ಮೀರಾ ನಾಯಕ ಲೋಕಾರ್ಪಣೆಗೊಳಿಸುವರು. ಪ್ರಾಧ್ಯಾಪಕ ಪ್ರೊ.ಎನ್.ಬೋರಲಿಂಗಯ್ಯ, ಮಹಾಜನ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಅಭಿನವ ಸಂಸ್ಥೆಯ ನ.ರವಿಕುಮಾರ್ ಇತರರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಅಂತಕರಣದ ಅನುರೂಪ ಜಿ.ಎಚ್.ನಾಯಕ ಕುರಿತ ಗೋಷ್ಠಿಯಲ್ಲಿ ಕೀರ್ತಿಶ್ರೀನಾಯಕ, ಪ್ರೊ.ಪಂಡಿತಾರಾಧ್ಯ, ಪ್ರೊ.ಎಂ.ಕೃಷ್ಣೇಗೌಡ, ಡಾ.ವಿನೋದಮ್ಮ ವಿವಿಧ ವಿಷಯ ಮಂಡಿಸುವರು.
ಎರಡನೇ ಗೋಷ್ಠಿಯಲ್ಲಿ ಡಾ.ರಾಜೇಂದ್ರ ಚೆನ್ನಿ, ಜೆ.ಮನೋಜ್‌ಕುಮಾರ್, 3ನೇ ಗೋಷ್ಠಿಯಲ್ಲಿ ಡಾ.ವಿಕ್ರಮ ವಿಸಾಜಿ, ಡಾ.ಸುಭಾಷ್ ರಾಜಮಾನೆ, ಡಾ.ಸಿರಾಜ್ ಅಹಮದ್, ಡಾ.ಪಿ.ಚಂದ್ರಿಕಾ,ಪ್ರೊ.ತಮಿಳ್ ಸೆಲ್ವಿ, ಜಿ.ಪಿ.ಬಸವರಾಜು ಇತರರು ವಿಷಯ ಮಂಡಿಸುವರು. 4ನೇ ಗೋಷ್ಠಿಯಲ್ಲಿ ಡಾ.ಎಂ.ಎಸ್.ಆಶಾದೇವಿ, ಡಾ.ಬಿ.ಆರ್.ಜಯಕುಮಾರಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ನಿರಂತರ ಅಧ್ಯಯನ, ಆಳವಾದ ಪಾಂಡಿತ್ಯ, ಸೂಕ್ಷ್ಮ ಸಂವೇದನೆ, ಖಚಿತ ಮತ್ತು ಸ್ಪಷ್ಟ ನಿಲುವನ್ನು ನಾಯಕರು ಹೊಂದಿದ್ದರು. ಅವರ ಬರಹಗಳ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಸಾಮಾಜಿಕ ಮೌಲ್ಯಗಳ ಚಹರೆ, ಮಾದರಿ ಗುರುತಿಸುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಬಿ.ಆರ್.ಜಯಕುಮಾರಿ, ಅಭಿನವ ಪ್ರಕಾಶನದ ಪರವಾಗಿ ನಿಂಗರಾಜು ಚಿತ್ತಣ್ಣನವರ್ ಇದ್ದರು.