ಸೆ.22 ರಿಂದ ಸಂಘಟನೆಗಳಿಂದಲೇ ದಸರಾ ಆಚರಣ

Published on

ಚಾಮರಾಜನಗರ: ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಸೆ.22 ರಿಂದ ಸೆ.30 ರವರೆಗೆ ಚಾಮರಾಜನಗರ ದಸರಾ ಆಚರಣೆ ಮಾಡಲಾಗುವುದು ಎಂದು ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ತಿಳಿಸಿದರು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಸೆ. 22 ರಂದು ಸಂಜೆ 5 ಗಂಟೆಗೆ ಜಿಲ್ಲೆಯ 10 ಜನ ಕಲಾವಿದರಿಂದ ದಸರಾ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಸರ್ಕಾರದ ವತಿಯಿಂದ ಈ ಬಾರಿ ಚಾಮರಾಜನಗರದಲ್ಲಿ ದಸರಾ ಆಚರಣೆ ಮಾಡದ ಕಾರಣ ಜಿಲ್ಲಾ ಕಲಾವಿದರನ್ನು ಒಳಗೊಂಡು ಸ್ಥಳೀಯ ಜನಸಾಮಾನ್ಯರೊಂದಿಗೆ 9 ದಿನಗಳ ಕಾಲ ಸಂಜೆ 6ರಿಂದ ರಾತ್ರಿ 9 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013 ರಿಂದ ಚಾ.ನಗರದಲ್ಲಿ ದಸರಾ ಆಚರಣೆಗೆ ಮುಂದಾದರು. ಆದರೆ, ಈ ಬಾರಿ ದಸರಾ ಆಚರಣೆ ಮಾಡುವುದಿಲ್ಲ ಎಂದು ಹೇಳಿರುವುದು ಬಹಳ ನೋವುಂಟು ಮಾಡಿದೆ. ಸಿದ್ದರಾಮಯ್ಯ ಅವರೇ ಹುಟ್ಟುಹಾಕಿದ ಚಾ.ನಗರ ದಸರಾ ಆಚರಣೆಯನ್ನು ಅವರೇ ನಾಶಪಡಿಸಲು ಮುಂದಾಗಿರುವುದು ಸರಿಯಲ್ಲ. ಕಳೆದ ಬಾರಿ 2 ಕೋಟಿ ರೂ, ಅನುದಾನ ನೀಡಿ ದಸರಾ ಆಚರಣೆ ಮಾಡಿದ್ದರು. ಈ ಬಾರಿ ಅನುದಾನ ಕೊರತೆ ಇದ್ದರೆ 2 ದಿನಗಳಾದರೂ ದಸರಾ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಹಳೆ ರವಿಚಂದ್ರಪ್ರಸಾದ್, ಪಣ್ಯದಹುಂಡಿ ರಾಜು, ಶಿವಣ್ಣ ಹೊಸೂರು, ರಾಚಪ್ಪ, ಮುತ್ತು, ರಾಜಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net