

ಹಾಸನ: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಶಾಖೆ ಮಹಿಳಾ ವಿಭಾಗದ ವತಿಯಿಂದ ಸೃಷ್ಟಿ-2024 ಹೆಸರಿನ ರಾಜ್ಯಮಟ್ಟದ 6ನೇ ಮಹಿಳಾ ವೈದ್ಯರ ಸಮಾವೇಶವನ್ನು ಸೆ.22 ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಕೆ.ಸೌಮ್ಯಮಣಿತಿಳಿಸಿದರು.
ಸೆಲ್ಫ್ ಕೇರ್-ಹೆಲ್ತ್ ಕೇರ್ ಎಂಬ ಧ್ಯೇಯದೊಂದಿಗೆ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ನಂದಗೋಕುಲ ಕನ್ವೆನ್‌ಷನ್ ಕೇಂದ್ರದಲ್ಲಿ ಸಮಾವೇಶ ನಡೆಯಲಿದೆ. ಪ್ರಸ್ತುತ ಸಮಾಜದಲ್ಲಿ ಹಲವಾರು ಜವಾಬ್ದಾರಿ ಹೊಂದಿರುವ ಮಹಿಳೆ, ಅವುಗಳನ್ನು ನಿಭಾಯಿಸುತ್ತಾ ಜೀವನ ನಡೆಸಬೇಕಿದೆ.ಇದಕ್ಕಾಗಿ ಆಕೆ ಎಲ್ಲಾ ರೀತಿಯಲ್ಲೂ ಸಜ್ಜುಗೊಳ್ಳುವುದು ಮುಖ್ಯವಾದ ಅಂಶವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೈದ್ಯಕೀಯ ರಂಗದಲ್ಲಿರುವ ಮಹಿಳಾ ವೈದ್ಯರು, ಸಹಜವಾಗಿಯೇ ಹೆಚ್ಚಿನ ಒತ್ತಡದ ಸ್ಥಿತಿಯಲ್ಲಿರುತ್ತಾರೆ. ಮಹಿಳಾ ವೈದ್ಯೆ ತನ್ನ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಜಾಗರೂಕತೆಯಿಂದ ಕಾರ್ಯ ನಿರ್ವಹಣೆ ಜೊತೆಗೆ ಕೌಟುಂಬಿಕ ಹಾಗೂ ವೈಯಕ್ತಿಕ ಜೀವನವನ್ನೂ ಸಮತೋಲನಗೊಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಮಹಿಳಾ ವೈದ್ಯರ ವೈತ್ತಿಪರತೆ ಜೊತೆಗೆ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಲು ಪೂರಕವಾಗುವಂತೆ ಸೃಷ್ಟಿ ಸಮಾವೇಶ ಆಯೋಜಿಸಲಾಗಿದೆ. ಆರ್‌ಜಿಯುಎಚ್‌ಎಸ್‌ನ ಮೊದಲ ಉಪ ಕುಲಪತಿ ಡಾ.ಎಸ್.ಕಾಂತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಉತ್ತಮ ವಾಗ್ಮಿಗಳಿಂದ ಕೂಡಿದ ವಿಮರ್ಶೆ, ವಿಚಾರ-ವಿನಿಮಯ ಈ ಸಮಾವೇಶ ಒಂದು ಉತ್ತಮ ವೇದಿಕೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು 350ಕ್ಕೂ ವೈದ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ನಗರದಿಂದಲೂ ಸುಮಾರು 100 ವೈದ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಹಾರ್ಮೋನ್ ಕೊರತೆಯಿಂದ ಮಹಿಳೆಯರ ಅಂಗಾಂಗ ನಿರ್ವಹಣೆ ವ್ಯತ್ಯಾಸದ ಬಗ್ಗೆ ಹಾಗೂ ಒತ್ತಡ ನಿಭಾಯಿಸುವುದು ಹೇಗೆ ಎಂಬ ಕುರಿತು ಹೆಸರಾಂತ ವೈದ್ಯರಾದ ಡಾ.ಕಾಮಿನಿ ಎ.ರಾವ್ ಹಾಗೂ ಹೊಸದೆಹಲಿಯ ಡಾ.ವಾಗೀಶ್ ಮಾತನಾಡಲಿದ್ದಾರೆ ಎಂದು ಹೇಳಿದರು.
ಇದೇ ವೈದ್ಯರ ಮೇಲೆ ಹಲ್ಲೆ ಪ್ರಕರಣ ಮರುಕಳಿಸಬಾರದು. ಎಲ್ಲದಕ್ಕೂ ವೈದ್ಯರೇ ಕಾರಣರಲ್ಲ, ಈ ಬಗ್ಗೆ ಸಾರ್ವಜನಿಕರೂ ಅರಿತುಕೊಳ್ಳಬೇಕು ಎಂದು ಹೇಳಿದರು. ಹಲ್ಲೆ, ದೌರ್ಜನ್ಯ ಮೊದಲಾದ ಪ್ರಕರಣ ತಡೆಯಲು ರೂಪಿಸಿರುವ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ಎ.ಸಾವಿತ್ರಿ, ಸಂಘಟನಾ ಕಾರ್ಯದರ್ಶಿ ಡಾ. ಕೆ.ವಿ.ಕಿರಣ, ಡಾ.ರಂಗಲಕ್ಷ್ಮಿ, ಡಾ.ವೇದಾವತಿ ಇದ್ದರು.