ಸೆ.14ರಂದು ಪೌರಕಾರ್ಮಿಕರಿಂದ ಸಾಂಕೇತಿಕ ಧರಣಿ

Published on

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ. 14 ರಂದು ನಗರಪಾಲಿಕೆ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಮೈಸೂರು ಮಹಾ ನಗರಪಾಲಿಕೆ ಪೌರ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಮಾಂಜನೇಯ ತಿಳಿಸಿದರು.
ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಒಂದು ವೇಳೆ ಬೇಡಕೆಗೆ ಸ್ಪಂದನೆ ದೊರೆಯದಿದ್ದರೆ ಈ ಬಾರಿಯ ದಸರಾ ವೇಳೆ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯಬಹಿಷ್ಕರಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಯಂ ಪೌರ ಕಾರ್ಮಿಕರಿಗೆ ಜಯನಗರ ಬಳಿಯ ಮಳಲವಾಡಿಯಲ್ಲಿ ಗೃಹಭಾಗ್ಯ ಯೋಜನೆ ಅಡಿ ಗುರುತಿಸಿರುವ ಜಾಗದಲ್ಲಿ ಮನೆ ನಿರ್ಮಿಸಿಕೊಡಬೇಕು. ನಗರಪಾಲಿಕೆ ನೇರ ಪಾವತಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರಲ್ಲಿ ಹಲವರು ನಿವೃತ್ತ, ಕೆಲವರು ಮೃತಪಟ್ಟಿದ್ದು, ಅಂತವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಮೃತರಾದ ಪೌರ ಕಾರ್ಮಿಕರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಕೈಬಿಟ್ಟಿರುವ ಸುಮಾರು 48 ಪೌರ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಮಹಿಳಾ ಪೌರ ಕಾರ್ಮಿಕರು ದೂರದ ಊರುಗಳಿಂದ ಬರುತ್ತಿದ್ದು, ಇವರಿಗಾಗಿ ಪಾಲಿಕೆಯ ಎಲ್ಲ 45 ವಾರ್ಡ್‌ಗಳಲ್ಲಿಯೂ ವಿಶ್ರಾಂತಿ ಕೊಠಡಿ ನಿರ್ಮಿಸಿಕೊಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಎನ್.ರಾಜು, ಗೌರವಾಧ್ಯಕ್ಷ ಸಿ.ಎಂ.ರಾಮಯ್ಯ, ಕಾರ್ಯಾಧ್ಯಕ್ಷ ಎಂ.ವಿ.ವೆಂಕಟೇಶ್, ಸಲಹೆಗಾರ ನರಸಿಂಹ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net