

ಹಾಸನ: ಸನಾಂಬ ಥಿಯಸಾಫಿಕಲ್ ಸೊಸೈಟಿ ಮತ್ತು ಜಿಲ್ಲಾ ಥಿಯಸಾಫಿಕಲ್ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ 115ನೇ ವಾರ್ಷಿಕ ಸಮ್ಮೇಳನ ಹಾಗೂ ಹಾಸನಾಂಬ ಥಿಯಸಾಫಿಕಲ್ ಸೊಸೈಟಿಯ 119ನೇ ವಾರ್ಷಿಕೋತ್ಸವ ನಗರದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎ.ಆರ್.ಜನಾರ್ಧನಗುಪ್ತ ಹೇಳಿದರು.
ನಗರದ ಶುಭೋದಯ ಕಲ್ಯಾಣ ಮಂಟಪದಲ್ಲಿ ಸೆ.14, 15 ಮತ್ತು 16 ರಂದು ಕಾರ್ಯಕ್ರಮ ನಡೆಯಲಿದೆ. ಥಿಯಸಾಫಿಕಲ್ ಸೊಸೈಟಿ ಅಥವಾ ಬ್ರಹ್ಮವಿದ್ಯಾ ಸಮಾಜ, ಪ್ರಪಂಚದ 58 ರಾಷ್ಟ್ರಗಳಲ್ಲಿ ಪಸರಿಸಿದೆ. ವಿಶ್ವಸಂಸ್ಥೆ ಮಾನ್ಯತೆ ಪಡೆದಿದೆ. ಇದರ ಮೂಲ ಉದ್ದೇಶ ಕುಲ, ಮತ, ಲಿಂಗ, ಜಾತಿ ಅಥವಾ ವರ್ಣಗಳ ಭೇದವನ್ನು ಎಣಿಸದೆ ಮಾನವರ ಸಾರ್ವತ್ರಿಕ ಸೋದರಭಾವದ ಒಂದು ಅಂಕುರ ಏರ್ಪಡಿಸುವುದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿ ತಿಳಿಸಿದರು.
ತುಲನಾತ್ಮಕ ಮತ, ತತ್ವಶಾಸ್ತ್ರ ಮತ್ತು ವಿಜ್ಞಾನಗಳ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಸ್ಪಷ್ಟವಲ್ಲದ ಪ್ರಕೃತಿ ನಿಯಮಗಳನ್ನು ಮತ್ತು ಮಾನವನಲ್ಲಿರುವ ಸುಪ್ತ ಶಕ್ತಿಗಳನ್ನು ಪರಿಶೋಧಿಸುವುದಾಗಿದೆ.ಮುಖ್ಯವಾಗಿ ಆಧ್ಯಾತ್ಮಿಕ ಜಾಗೃತಿ,ಅರಿವನ್ನು ಪ್ರಚುರ ಪಡಿಸುವುದು ಸೊಸೈಟಿ ಹಾಗೂ ಒಕ್ಕೂಟದ ಉದ್ದೇಶ ಎಂದರು.
ಮೂರು ದಿನಗಳ ಸಮ್ಮೇಳನದಲ್ಲಿ ಎಲ್ಲ ಧರ್ಮಗಳ ಸದಸ್ಯರು, ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಸಮ್ಮೇಳನದ ಶೀರ್ಷಿಕೆ ಅನುಷ್ಠಾನಿಕ ಥಿಯಾಸಫಿ ಹಾಗೂ ಸಾರ್ವತ್ರಿಕ ನೈತಿಕತೆ ಎಂಬುದಾಗಿದ್ದು, ಭಗವದ್ಗೀತಾ ಸಾರ ದೃಶ್ಯ ರೂಪಕ, ಗ್ರಂಥಗಳ ಬಿಡುಗಡೆ, ವಿಚಾರ ಮಂಥನ, ಸಾರ್ವಜನಿಕ ಉಪನ್ಯಾಸ ಮೊದಲಾದ ಕಾರ್ಯಕ್ರಮ ನಡೆಯಲಿವೆ. 200 ರೂ. ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ 5 ನಿಮಿಷ ಮುಂಚಿತವಾಗಿ ಆಗಮಿಸಬೇಕು. ಹೆಚ್ಚಿನ ಮಾಹಿತಿಗಾಗಿ 8150832724, 8217359487, 8861075315 ಮತ್ತು 9663453767 ನಂಬರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಸಿ.ಡಿ.ಗುರುಲಿಂಗಪ್ಪ, ಹಾಸನಾಂಬ ಥಿಯಸಾಫಿಕಲ್ ಸೊಸೈಟಿ ಅಧ್ಯಕ್ಷ ಡಾ.ಎಂ.ಆರ್.ಚಂದ್ರಶೇಖರ್, ಕಾರ್ಯದರ್ಶಿ ಕಾಳಾಚಾರ್, ಖಜಾಂಚಿ ಬ್ಯಾಟಾಚಾರ್, ಸ್ವಾತಿ ಇದ್ದರು.