ಸೆ.10ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

tender coconut2
Published on

ಗೋಣಿಕೊಪ್ಪ: ಮಾಯಮುಡಿಯ ಐರನ್ ಸೈಟ್ ಶೂಟರ್ಸ್ ತಂಡದ ವತಿಯಿಂದ ಕೈಲ್ ಪೋಳ್ದ್ ಹಬ್ಬದ ಅಂಗವಾಗಿ ತೋಕ್ ನಮ್ಮೆ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ 4ನೇ ವರ್ಷದ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಯೋಜನಾ ನಿರ್ದೇಶಕ ಆಪಟ್ಟೀರ ಆರ್.ಅಯ್ಯಪ್ಪ ತಿಳಿಸಿದರು.

ಗೋಣಿಕೊಪ್ಪಲು ಸಮೀಪದ ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೆ.10ರಂದು ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ 0.22 ರೈಫಲ್, 12ನೇ ಬೋರ್ ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಮತ್ತು ಏರ್‌ಗನ್ ಟಾರ್ಗೆಟ್ ಶೂಟಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

0.22 ರೈಫಲ್ ವಿಭಾಗದಲ್ಲಿ 50 ಮೀ., 12ನೇ ಬೋರ್ ಕೋವಿಯ ವಿಭಾಗದಲ್ಲಿ 30 ಮೀ. ಅಂತರ ಹಾಗೂ ಏರ್‌ಗನ್ ಟಾರ್ಗೆಟ್ ಶೂಟಿಂಗ್‌ನಲ್ಲಿ 10 ಮೀಟರ್ ಅಂತರದಲ್ಲಿ ಗುಂಡು ಹೊಡೆದು ಸ್ಪರ್ಧಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದು. 3 ಪ್ರತ್ಯೇಕ ಸ್ಪರ್ಧೆಯಲ್ಲಿ ವಿಜಯಿಗಳಾಗುವವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಆಸಕ್ತರು ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ ಮುಕ್ತವಾಗಿ ಭಾಗವಹಿಸಬಹುದಾಗಿದೆ. ಅಂದು ಬೆಳಗ್ಗೆ 10 ಗಂಟೆಯೊಳಗಾಗಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಮೊ. 9611870813 ಸಂಪರ್ಕಿಸಬಹುದು ಎಂದರು.

ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆ. ಮಾಹಿತಿ ಮತ್ತು ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇಲ್ಲದಾಗಿದೆ. ಇದರಿಂದ ಬಹಳಷ್ಟು ಗ್ರಾಮೀಣ ಕ್ರೀಡೆಗಳು ಜನರಿಂದ ದೂರವಾಗುತ್ತಿದೆ. ಇದನ್ನು ಮನಗಂಡ ಐರನ್ ಸೈಟ್ ಶೂಟರ್ಸ್ ಎಂಬ ಹೆಸರಿನ ಶೂಟರ್ಸ್ ತಂಡವನ್ನು 3 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು.

3 ವರ್ಷಗಳಿಂದ ಕೈಲ್ ಪೋಳ್ದ್ ಹಬ್ಬದ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ರಾಜ್ಯಮಟ್ಟದ ಸ್ಪರ್ಧೆಯಾಗಿ ಇದನ್ನು ವಿಸ್ತರಿಸಲಾಗಿದೆ. 3 ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆ ಇದೀಗ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಅದೇ ರೀತಿ ಈ ವರ್ಷವೂ ಹೆಚ್ಚಿನ ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದೆ ಎಂದು ಟಾಟು ಮೊಣ್ಣಪ್ಪ ಹೇಳಿದರು.


ಶಾಂತೆಯಂಡ ಮಧು ಮಾಚಯ್ಯ, ಬಾನಂಡ ಪ್ರತ್ಯು, ಸಣ್ಣುವಂಡ ಚಿಟ್ಟಿಯಪ್ಪ, ಆಪಟ್ಟೀರ ಶ್ಯಾಮ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net