

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಮುನ್ನುಡಿಯಂತೆ ಆರಂಭವಾಗುವ ದಸರಾ ಯುವ ಸಂಭ್ರಮ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸೆ.10 ರಿಂದ 17ರವರೆಗೆ ನಡೆಯಲಿದೆ. 14 ವಿಶಿಷ್ಟ ವಸ್ತು ವಿಷಯಗಳಡಿ (ಥೀಮ್) ರಾಜ್ಯದ ವಿವಿಧ ಕಾಲೇಜಿನ ಸುಮಾರು 400 ರಿಂದ 500 ತಂಡಗಳು ಭಾಗವಹಿಸಲಿವೆ.
ಸೆ.10 ರಂದು ಸಂಜೆ 5 ಗಂಟೆಗೆ ಯುವ ಸಂಭ್ರಮ ಉದ್ಘಾಟನೆಗೊಳ್ಳಲಿದ್ದು, ನಟ ಯುವ ರಾಜ್‌ಕುಮಾರ್, ನಟಿ ಅಮೃತಾ ಅಯ್ಯಂಗಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
14 ವಿಷಯಗಳ ಥೀಮ್: ದಸರಾ ಯುವ ಸಂಭ್ರಮ ಉಪಸಮಿತಿಯು 14 ಮುಖ್ಯ ವಸ್ತು ವಿಷಯಗಳೊಂದಿಗೆ ಹಲವು ಮಹತ್ವದ ವಿಷಯ ನೀಡಿದ್ದು, ಅದರಂತೆ ಸಜ್ಜುಗೊಳ್ಳಲು ಕಾಲೇಜು ತಂಡಗಳು ತಯಾರಿ ನಡೆಸುತ್ತಿವೆ. ನೃತ್ಯ ಸಂಭ್ರಮದೊಂದಿಗೆ ಸಾಮಾಜಿಕ ಕಳಕಳಿ ಸಾರುವಂತೆ ವಸ್ತು ವಿಷಯಗಳನ್ನು ಉಪಸಮಿತಿ ನೀಡಿದೆ.
ಕರ್ನಾಟಕ ಜಾನಪದ ವೈವಿಧ್ಯತೆ ಮತ್ತು ಪರಂಪರೆ, ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯಪ್ರಕಾರ, ಕನ್ನಡ ಸಿನಿಮಾಧಾರಿತ ಆಧುನಿಕ ನೃತ್ಯ ಪ್ರಕಾರಗಳು, ಹಳೇ ಹಾಗೂ ಹೊಸ ಗೀತ ಗಾಯನಗಳ ಸಂಯೋಜನೆಯೊಂದಿಗೆ ಕರ್ನಾಟಕದ ವೈಭವ ಸಾರುವಂತಹ ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.
ಶೀರ್ಷಿಕೆ ಗೀತೆ: ಸೋಮಶೇಖರ್ ಜಿಗಣಿ, ಮನೋಜ್ ಸೌಗಂದ್ ಬರೆದಿರುವ ಯುವ ಸಂಭ್ರಮ ಶೀರ್ಷಿಕೆ ಗೀತೆಯನ್ನು ನೀತು ನಿನಾದ ಸಂಗೀತದಲ್ಲಿ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರಮನೆ ಆವರಣದಲ್ಲಿ ಹಾಡಿಗೆ ನೃತ್ಯ ಮಾಡಿದ್ದು, ನಾಡಿನ ಕಲೆ, ಪರಂಪರೆ ಅನಾವರಣಗೊಂಡಿದೆ.