

ಇಂಡಿ: ರಾಷ್ಟ್ರೀಯ ಜಾನುವಾರು ಗಣತಿಗೆ ಸಿದ್ದತೆ ಆರಂಭವಾಗಿದ್ದು, ಸೆ.1 ರಂದು 21ನೇ ಜಾನುವಾರು ಗಣತಿ ಕಾರ್ಯಕ್ಕೆ ಇಂಡಿ ತಾಲೂಕಿನಲ್ಲಿ ಚಾಲನೆ ಸಿಗಲಿದೆ. ಇದಕ್ಕಾಗಿ ಪಶುಪಾಲನಾ ಇಲಾಖೆ ಅಗತ್ಯ ಸಿದ್ಧತೆಗೆ ಮುಂದಾಗಿದೆ ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ.ರಾಜಕುಮಾರ ಅಡಕಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲೂಕಿನಲ್ಲಿ ಹೈನುಗಾರಿಕೆ, ಪಶುಪಾಲನೆ ಪ್ರಮುಖ ವೃತ್ತಿಯಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಗಣನೀಯವಾಗಿ ಕುಸಿತ ಕಾಣುತ್ತಿದೆ. 19ನೇ ಜಾನುವಾರು ಗಣತಿಗೆ ಹೋಲಿಸಿದರೆ 20ರಲ್ಲಿ ಈ ಪ್ರಮಾಣ ಕಡಿಮೆಯಾಗಿದೆ. ನಂತರ ಕೂಡ ವರ್ಷದಿಂದ ವರ್ಷಕ್ಕೆ ಇಳಿಕೆ ಕಂಡು ಬಂದಿದೆ. ಪ್ರತಿ 5 ವರ್ಷಕ್ಕೊಮ್ಮೆ ನಡೆಸಲಾಗುವ ಜಾನುವಾರು ಗಣತಿಯಲ್ಲಿ ಜಾನುವಾರು ಪ್ರಮಾಣ, ವಯಸ್ಸು, ಲಿಂಗ ಸಂಯೋಜನೆ, ಕೋಳಿ, ಕುರಿ, ಮೇಕೆ ಸಾಕಣೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಇಂಡಿ ತಾಲೂಕಿನಲ್ಲಿ ಪಶು ಆಸ್ಪತ್ರೆ 2, ಪಶು ಚಿಕಿತ್ಸಾಲಯ 14 ಹಾಗೂ ಪ್ರಾಥಮಿಕ ಪಶು ಚಿಕಿತ್ಸಾಲಯ 4 ಕೇಂದ್ರಗಳಿವೆ.
ಗಣತಿದಾರರು 14 ಜನರಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಗಣತಿ ಮಾಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಮಣ್ಣ ಉಪ್ಪಾರ, ರಮೇಶ ನರಳೆ, ಜೆ.ಎಚ್. ಬಾಗವಾನ, ಪುಂಡಲೀಕ ಕೂಡಗಿ ಮತ್ತಿತರರಿದ್ದರು.
ಜಾನುವಾರು ಗಣತಿಗೆ ತಂಡಗಳ ರಚನೆ ಮಾಡಿ ತರಬೇತಿ ನೀಡಲಾಗುತ್ತಿದೆ. ಗಣತಿ ಕಾರ್ಯಕ್ರಮದ ಬಗ್ಗೆ ರೈತರಿಗೂ ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಾನುವಾರು ಸಂಪೂರ್ಣ ಅಂಕಿ-ಅಂಶಗಳ ಬಗ್ಗೆ ಜಾನುವಾರು ಗಣತಿಯ ನಂತರ ಮಾಹಿತಿ ನೀಡಲಾಗುವುದು.ರಾಜಕುಮಾರ ಅಡಕಿ, ಮುಖ್ಯ ವೈದ್ಯಾಧಿಕಾರಿ, ಪಶು ಆಸ್ಪತ್ರೆ ಇಂಡಿ
ಈ ಬಾರಿ ಗಣತಿಯ ನಂತರವಾದರೂ ಸರ್ಕಾರ ಜಾನುವಾರು ಸಂಖ್ಯೆಗಳ ಆಧಾರದಲ್ಲಿ ನೆರವು ನೀಡಲು ಮುಂದಾಗಬೇಕು. ಹೈನುಗಾರಿಕೆಯ ನಿರ್ವಹಣಾ ವೆಚ್ಚ ಕಡಿಮೆ ಮಾಡಲು ಪ್ರಯತ್ನಿಸಬೇಕು.ಎಸ್.ಬಿ.ಕೆಂಬೋಗಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ, ಇಂಡಿ