

ಮುಂಡರಗಿ: ದೇವರು ಅದ್ಭುತ ಭೂಮಿಯನ್ನು ನಿರ್ವಿುಸಿಕೊಟ್ಟಿದ್ದಾನೆ. ಈ ಸೃಷ್ಟಿಯನ್ನು ಅನುಭವಿಸಿ, ಆನಂದಿಸಿ, ಆರಾಧಿಸಬೇಕು. ಜಗತ್ತನ್ನು ಕೆಡಿಸಿ ಅನುಭವಿಸಬಾರದು ನಾವು ಜಗತ್ತನ್ನು ಶ್ರೀಮಂತಗೊಳಿಸಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ನೀಡಬೇಕು. ಉತ್ತಮ ಸಂಸ್ಕಾರದಲ್ಲಿ ಬೆಳೆದ ಮಕ್ಕಳು ಜಗತ್ತಿಗೆ ಬೆಳಕಾಗುತ್ತಾರೆ. ನಮ್ಮ ದೇಹವು ಪಂಚ ಮಹಾಭೂತಗಳಿಂದ ನಿರ್ವಣವಾಗಿದೆ. ಅದಕ್ಕೆ ಉತ್ತಮ ಸಂಸ್ಕಾರ ನೀಡಬೇಕಿದೆ. ಪರಿಸರವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಿಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಮಾತನಾಡಿ, ತಂದೆ ತಾಯಿಗಳ ಮಾತು ಕೇಳುವ ಮಕ್ಕಳಿಗೆ ಬಾಲ್ಯದಲ್ಲಿಯೇ ಅರ್ಧ ಶಿಕ್ಷಣ ದೊರೆತಿರುತ್ತದೆ. ಆದ್ದರಿಂದ ಮಕ್ಕಳು ಮೊದಲು ತಮ್ಮ ತಂದೆ ತಾಯಿಗಳ ಮಾತುಗಳನ್ನು ಕೇಳಬೇಕು. ಸಕರಾತ್ಮಕ ಮನೋಭಾವದಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಜಾತ್ರೆಯಲ್ಲಿ ಕೊಡಲ್ಪಡುವ ಶ್ರೀಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರವನ್ನು ಕಿಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಅವರಿಗೆ ನೀಡಿ ಗೌರವಿಸಲಾಯಿತು. ಶಿವಭಕ್ತಿ ಗೀತಾಂಜಲಿ ಗ್ರಂಥ ಬಿಡುಗಡೆಗೊಳಿಸಲಾಯಿತು. ರಾಜಗುರು ಗುರುಸ್ವಾಮಿ ಗವಾಯಿ ಹಾಗೂ ನಾರಾಯಣ ಹಿರೇಕೊಳಚಿ ತಂಡದವರಿಂದ ಸಂಗೀತ ಸೇವೆ ಜರುಗಿತು. ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ, ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಮಲ್ಲಿಕಾರ್ಜುನ ಸ್ವಾಮೀಜಿ, ನಿರಂಜನ ದೇವರು, ಪ್ರಭುಕುಮಾರ ಸ್ವಾಮೀಜಿ, ಡಾ.ಬಿ.ಜೆ. ಜವಳಿ ಉಪಸ್ಥಿತರಿದ್ದರು. ಪ್ರಾಚಾರ್ಯ ಸಿ.ಎಸ್. ಅರಸನಾಳ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ
ಮುಂಡರಗಿ: ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ವೃತ್ತಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಸಿಬ್ಬಂದಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಲಿ ಇರುವ ಹುದ್ದೆಗಳನ್ನು ತುಂಬುವಂತೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಮಂತ್ರಿಗಳ ಗಮನಕ್ಕೆ ತರಲಾಗಿದೆ. 2019ರವರೆಗೆ ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳನ್ನು ತುಂಬಲು 2-3 ತಿಂಗಳಲ್ಲಿ ಸರ್ಕಾರ ಅನುಮತಿ ನೀಡಲಿದೆ. ಶಿಕ್ಷಕರ ಸಮಸ್ಯೆ ಏನೇ ಇದ್ದರೂ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಬಹುಮುಖ್ಯ. ಶಿಕ್ಷಣಕ್ಕೆ ಯಾವುದೇ ಬಡತನ, ಜಾತಿ ಅಡ್ಡಿಯಾಗುವುದಿಲ್ಲ. ಸಾಧಿಸುವ ಗುರಿ, ಛಲದಿಂದ ಮುನ್ನಡೆಯಬೇಕು. ಮಕ್ಕಳು ಆತ್ಮವಿಶ್ವಾಸ, ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಶಸ್ಸು ಪಡೆದುಕೊಳ್ಳಲು ಸಾಧ್ಯ ಎಂದರು.
ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 50 ವರ್ಷಗಳ ಹಿಂದೆ ಡಾ.ಅನ್ನದಾನೀಶ್ವರ ಪೂಜ್ಯರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣದ ಕ್ರಾಂತಿ ಮಾಡಿದ್ದಾರೆ. ಸಮಾಜದಲ್ಲಿ ಶಿಕ್ಷಕ, ಸೈನಿಕ, ರೈತರಿಗೆ ತುಂಬಾ ಗೌರವವಿದೆ ಎಂದು ಹೇಳಿದರು.
ಸೋಮಶಂಕರ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಎಸಿ ರಾಯಪ್ಪ ಹುಣಸಗಿ, ಬಿಇಒ ಎಸ್.ಎನ್. ಹಳ್ಳಿಗುಡಿ ಮಾತನಾಡಿದರು. ಜಗದ್ಗುರು ಅನ್ನದಾನೀಶ್ವರ ಬಿಎಡ್ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಬನ್ನಿಕೊಪ್ಪ ಅನ್ನದಾನೀಶ್ವರ ಪ್ರೌಢಶಾಲೆ ಮಕ್ಕಳು ಕಂಸಾಲೆ ನೃತ್ಯ ಸಾದರ ಪಡಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿದ ವಿದ್ಯಾ ಸಮಿತಿಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎ.ವಿ. ಪಟ್ಟಣಶೆಟ್ಟರ್, ಕರಬಸಪ್ಪ ಹಂಚಿನಾಳ, ರಾಮಸ್ವಾಮಿ ಹೆಗ್ಗಡಾಳ, ಬಾಬಣ್ಣ ಶಿವಶೆಟ್ಟರ್, ಯು.ಸಿ. ಹಂಪಿಮಠ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಆರ್.ರಿತ್ತಿ ಕಾರ್ಯಕ್ರಮ ನಿರೂಪಿಸಿದರು.
ಸೋಮಶಂಕರ ಸ್ವಾಮೀಜಿ ಜಂಗಮೋತ್ಸವ
ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಉತ್ತಂಗಿ ಶ್ರೀ ಸೋಮಶಂಕರ ಸ್ವಾಮೀಜಿ ಜಂಗಮೋತ್ಸವ ಸಕಲ ವಾದ್ಯ ಮೇಳದೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.
ಶ್ರೀಮಠದಿಂದ ಹೊರಟ ಜಂಗಮೋತ್ಸವವು ಮುಖ್ಯ ಬಜಾರ್ ಮೂಲಕ ಕಡ್ಲಿಪೇಟೆಯ ಗಣೇಶ ದೇವಸ್ಥಾನ ಮಾರ್ಗವಾಗಿ ಪುನಃ ಮಠವನ್ನು ತಲುಪಿತು. ಜಂಗಮೋತ್ಸವದುದ್ದಕ್ಕೂ ಭಕ್ತರು ಹೂವು, ಹಣ್ಣು, ಕಾಯಿಗಳನ್ನು ಅರ್ಪಿಸಿ ಶ್ರೀಗಳಿಂದ ದರ್ಶನಾಶೀರ್ವಾದ ಪಡೆದರು. ಜಾತ್ರಾ ಕಮಿಟಿ ಅಧ್ಯಕ್ಷ ಪವನ ಮೇಟಿ, ವಿ.ಎಸ್. ಗಟ್ಟಿ, ಮಂಜುನಾಥ ಶಿವಶೆಟ್ಟರ್, ಧೃವಕುಮಾರ ಹೂಗಾರ, ವೀರೇಶ ಸಜ್ಜನರ, ಡಾ.ಬಿ.ಜಿ. ಜವಳಿ, ಅನುಪಕುಮಾರ ಹಂಚಿನಾಳ, ಪ್ರಶಾಂತಗೌಡ ಪಾಟೀಲ, ಬಸವರಾಜ ದೇಸಾಯಿ, ರವೀಂದ್ರಗೌಡ ಪಾಟೀಲ, ದಸ್ತಗೀರಸಾಬ್ ಹೊಸಮನಿ, ಡಾ.ಎ.ಬಿ. ಶಿವಶೆಟ್ಟರ್, ಪ್ರಶಾಂತ ಹಿರೇಮಠ, ಕುಮಾರ ಬನ್ನಿಕೊಪ್ಪ, ಗುರುಲಿಂಗಯ್ಯ ಕೊಳ್ಳಿಮಠ, ಮಂಜುನಾಥ ಮುಧೋಳ ಇತರರು ಇದ್ದರು.