

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಷ್ಟ್ರೋತ್ಥಾನ ಪರಿಷತ್ ಸಹಯೋಗದೊಂದಿಗೆ ಆರಂಭಿಸಿರುವ ಸೃಷ್ಟಿ ಪ್ರಯೋಗಾಲಯದ (ಲ್ಯಾಬ್) ಲೋಕಾರ್ಪಣೆ ಕಾರ್ಯಕ್ರಮ ಡಿ. 20ರಂದು ಬೆಳಗ್ಗೆ 10 ಗಂಟೆಗೆ ನಗರದ ನ್ಯೂ ಕಾಟನ್ ಮಾರ್ಕೆಟ್ ಭವಾನಿ ಬಿಲ್ಡಿಂಗ್ನಲ್ಲಿ ನಡೆಯಲಿದೆ ಎಂದು ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಯೋಗಾಲಯದಲ್ಲಿ ರಕ್ತದ ಎಲ್ಲ ಮಾದರಿ ಪರೀಕ್ಷೆಗಳನ್ನು ಶೇ. 30ರಿಂದ 50 ರಷ್ಟು ಕಡಿಮೆ ದರದಲ್ಲಿ ಮಾಡಲಾಗುವುದು. ರೋಗಿಗಳ ಮನೆಗೆ ಭೇಟಿ ನೀಡಿ ರಕ್ತದ ಮಾದರಿ ಸಂಗ್ರಹಿಸಿ ರಕ್ತ ಪರೀಕ್ಷೆ ಮಾಡಿ ವರದಿಯನ್ನು ಮನೆಗೆ ಮುಟ್ಟಿಸುವ ವ್ಯವಸ್ಥೆಯೂ ಇರುತ್ತದೆ. ಈ ವ್ಯವಸ್ಥೆಯೂ ಹುಬ್ಬಳ್ಳಿಯಿಂದ ನವನಗರದವರೆಗಿನ ನಿವಾಸಿಗಳಿಗೆ ಸೀಮಿತವಾಗಿರಲಿದೆ ಎಂದು ವಿವರಿಸಿದರು.
ಮನೆಯಲ್ಲಿ ರೋಗಿಗಳ ಆರೈಕೆಗೆ ನರ್ಸ್ಗಳನ್ನು ಕಳುಹಿಸುವ ವ್ಯವಸ್ಥೆ, ಇಸಿಜಿ ವ್ಯವಸ್ಥೆ, ವ್ಹೀಲ್ ಚೇರ್, ಏರ್ ಬೆಡ್, ವಾಟರ್ ಬೆಡ್, ಸಲೈನ್ ವ್ಯವಸ್ಥೆ, ಫಿಜಿಯೋಥೆರಪಿ ವ್ಯವಸ್ಥೆ ಮಾಡಲಾಗುವುದು. ಲ್ಯಾಬ್ ತಂತ್ರಜ್ಞಾನದಲ್ಲಿ 35 ವರ್ಷಗಳ ಅನುಭವವಿರುವ ಹರೀಶ ಜೋಶಿ ಅವರ ಮುಂದಾಳತ್ವದಲ್ಲಿ ಸೃಷ್ಟಿ ಪ್ರಯೋಗಾಲಯ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಡಿ. 20ರಂದು ಬೆಳಗ್ಗೆ 10 ಗಂಟೆಗೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಲೋಕಾರ್ಪಣೆ ಮಾಡುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಉದ್ಯಮಿ ಗೋವಿಂದ ಜೋಶಿ, ಡಾ. ಕ್ರಾಂತಿ ಕಿರಣ, ಡಾ. ಆಶಾ ದೇಶಪಾಂಡೆ ಪಾಲ್ಗೊಳ್ಳುವರು ಎಂದು ತಿಳಿಸಿದರು.</p><p>ಸುದ್ದಿಗೋಷ್ಠಿಯಲ್ಲಿ ಸೃಷ್ಟಿ ಪ್ರಯೋಗಾಲಯದ ಮುಖ್ಯಸ್ಥ ಹರೀಶ ಜೋಶಿ, ಡಾ. ಎಸ್.ಎಸ್. ಸಂಗೊಳ್ಳಿ, ಶ್ರೀಧರ ಜೋಶಿ, ಕಿರಣ ಗಡ, ವಿನೋದಕುಮಾರ ಪಟವಾ, ಡಾ. ಪವನ ಜೋಶಿ ಇದ್ದರು.