

ಹಾಸನ: ಗಾಂಧಿ ತತ್ವಗಳಿಗೆ ಪೂರಕವಾದ ಚಟುವಟಿಕೆಗಳು, ಉಪನ್ಯಾಸಗಳು, ಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಸಾಹಿತ್ಯ ಚಟುವಟಿಕೆಗಳು, ಗ್ರಾಮ ಸೇವಾ ತರಬೇತಿ ಶಿಬಿರಗಳು, ಸ್ವಯಂ ಉದ್ಯೋಗ ತರಬೇತಿ ಶಿಬಿರಗಳಂತಹ ಸೃಜನಶೀಲಾ ಹಾಗೂ ಸದಭಿರುಚಿಯ ಕಾರ್ಯಕ್ರಮಗಳನ್ನು ನಗರದ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ನಡೆಸಲು ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ತೀಮಾರ್ನಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗಾಂಧಿ ಭವನದ ಬಳಕೆ ಹಾಗೂ ನಿರ್ವಹಣೆ ಕುರಿತು ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಗಾಂಧಿ ಭವನವನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳು, ಯುವಕರು, ಗಾಂಧಿವಾದಿಗಳು ಹಾಗೂ ವಿಚಾರವಾದಿಗಳ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ. ಒಳಾಂಗಣ ಕಟ್ಟಡವನ್ನು ಉಪಯೋಗಿಸಿಕೊಳ್ಳಲು ಒಂದು ದಿನಕ್ಕೆ 8000 ರೂ.ಗಳು ಹಾಗೂ ಹೊರಾಂಗಣ ಒಳಗೊಂಡಂತೆ ಕಟ್ಟಡವನ್ನು ಉಪಯೋಗಿಸಿಕೊಳ್ಳಲು 20,000 ರೂ.ಗಳ ದಿನ ಬಾಡಿಗೆಯನ್ನು ನಿಗಧಿಪಡಿಸಲು ನಿರ್ಧರಿಸಲಾಯಿತು.
ಗಾಂಧಿ ಭವನದಲ್ಲಿ ಸರ್ಕಾರಿ ಇಲಾಖೆಗಳಿಗೆ, ಸಂಘ-ಸಂಸ್ಥೆಗಳಿಗೆ ಬಾಡಿಗೆ ಆಧಾರದ ಮೇಲೆ ನೀಡಲಾಗುವುದು. ಗಾಂಧಿ ತತ್ವಗಳಿಗೆ ಪೂರಕವಾದ ಕಾರ್ಯಕ್ರಮಗಳು ಹಾಗೂ ಸಭೆಗಳನ್ನು ಆಯೋಜಿಸಲು ಮಾತ್ರ ಅನುಮತಿ ನೀಡಬಹುದಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಮಿತಿಯ ಉಪಾಧ್ಯಕ್ಷರಾದ ಬಿ.ಆರ್ ಪೂರ್ಣಿಮಾ, ಸದಸ್ಯರುರಾದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಹಿರಿಯ ಪತ್ರಕರ್ತ ಆರ್.ಪಿ ವೆಂಕಟೇಶ ಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಪಿ ಮೋಹನ್ ಹಾಜರಿದ್ದು ಹಲವು ಸಲಹೆಗಳನ್ನು ನೀಡಿದರು.