

ಚಿಕ್ಕೋಡಿ: ನಾಟಕವನ್ನು ಬೋಧನೆಯೊಂದಿಗೆ ಸಂಯೋಜಿಸುವುದರಿಂದ ಕಲಿಕೆಯನ್ನು ಹೆಚ್ಚು ಅರ್ಥಪೂರ್ಣ ಮತ್ತು ಸಮಗ್ರವಾಗಿಸಬಹುದು ಎಂದು ಪ್ರಾಧ್ಯಾಪಕ ಎಸ್.ಎಂ.ಚಂದ್ಗಡೆ ಹೇಳಿದರು.
ತಾಲೂಕಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ೬ ಆಯಾಮ ಆಧಾರಿತ ನಾಟಕಾತ್ಮಕ ಪ್ರದರ್ಶನದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಹೊಸ ಶಿಕ್ಷಣ ನೀತಿಯು ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಇದು ಅವರ ಬೋಧನಾ ಕೌಶಲ, ಜ್ಯ್ನಾನ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಹಾಗೂ ಸಾಮಾಜಿಕ ಮತ್ತು ಭಾವನಾತ್ಮಕ ದೈಹಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ಶಿಕ್ಷಕರು ಸೃಜನಶೀಲ ಚಟುವಟಿಕೆ ಮೂಲಕ ಮಕ್ಕಳ ಕಲಿಕಾಸಕ್ತಿ ಹೆಚ್ಚಿಸಬೇಕು ಎಂದರು.
ಎನ್‌ಇಪಿಯ ೬ ಆಯಾಮಗಳಾದ ಶಾರೀರಿಕ ಅಭಿವೃದ್ಧಿ, ಅರಿವಿನ ಅಭಿವೃದ್ಧಿ, ಭಾಷೆ ಮತ್ತು ಸಾಕ್ಷರತೆ ಅಭಿವೃದ್ಧಿ, ಸಾಮಾಜಿಕ ಭಾವನಾತ್ಮಕ ಮತ್ತು ನೈತಿಕ ಅಭಿವೃದ್ಧಿ, ಸೌಂದರ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಕಾರಾತ್ಮಕ ಕಲಿಕೆ ಅಭ್ಯಾಸಗಳು ಇವುಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳು ನಾಟಕದ ಮೂಲಕ ಪ್ರಸ್ತುತಪಡಿಸಿದರು.
ಬನ್ನಪ್ಪ ಚೌಗುಲ, ಆಕಾಶ ಕೋಜಾಪುರ, ಮಾರುತಿ ನಿಕ್ಕಂ, ಅನುಸೂಯ ಸುಚಿತ್ರ ಚೌಗಲಾ, ಡಾ.ಕನಕಾಚಲ ಕನಕಗಿರಿ, ಡಾ.ಎನ್.ಎಸ್.ಶಿಂಧೆ, ಎಂ.ಎಚ್.ರಾವುತ್. ಪ್ರಶಾಂತ ಪತ್ತಾರ, ಆಕಾಶ ಕಾಂಬಳೆ ಇತರರಿದ್ದರು. ಐಸಿಟಿ ವಿಭಾಗದ ಕಾರ್ಯದರ್ಶಿ ಅನಿತಾ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಾ ಜರಳಿ ಸ್ವಾಗತಿಸಿದರು. ಗಂಗಾ ಜಾಧವ ನಿರೂಪಿಸಿದರು. ಕೀರ್ತಿ ಮಗದುಮ ವಂದಿಸಿದರು.