ಸೂಳೆಕೆರೆ ನೀರಿನ 1 ಮಾದರಿಯಲ್ಲಿ ಸೂಕ್ಷ್ಮಾಣು ಪತ್ತೆ

sulekere-1.jpg
Published on

ದಾವಣಗೆರೆ
 ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಸೂಳೆಕೆರೆಯ ನೀರಿನ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಜಾಕ್‌ವೆಲ್- 3 ರ ಒಂದು ಮಾದರಿಯಲ್ಲಿ ಮಾತ್ರ ಎರೋಮೊನಾಸ್ ಸೋರ್ಬಿಯಾ ಎಂಬ ಸೂಕ್ಷ್ಮಾಣು ಕಂಡುಬಂದಿದೆ.
 ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಕಾಲರಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ವೇಕ್ಷಣಾ ಘಟಕದ ಸೂಚನೆಯಂತೆ ಸೂಳೆಕೆರೆಯಿಂದ 6 ಮಾದರಿಗಳನ್ನು ಕಲ್ಚರ್ ಪರೀಕ್ಷೆಗಾಗಿ ಶಿವಮೊಗ್ಗದ ಮೆಡಿಕಲ್ ಕಾಲೇಜಿಗೆ ಕಳಿಸಲಾಗಿತ್ತು. ಆ ಪೈಕಿ 5 ಮಾದರಿಗಳಲ್ಲಿ ಯಾವುದೇ ಸೂಕ್ಷ್ಮಾಣು ಕಂಡುಬಂದಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ತಿಳಿಸಿದ್ದಾರೆ.
 ಎರೋಮೊನಾಸ್ ಸೋರ್ಬಿಯಾ ಎಂಬ ಸೂಕ್ಷ್ಮಾಣು ಕಂಡುಬಂದಿರುವ ಜಾಕ್‌ವೆಲ್- 3 ರಿಂದ ಪೂರೈಕೆಯಾಗುವ ನೀರನ್ನು ಮತ್ತೊಮ್ಮೆ ಕ್ಲೋರಿನೇಷನ್ ಮಾಡಿಸಿ, ಪರೀಕ್ಷೆಗೆ ಒಳಪಡಿಸಿ ಕುಡಿಯಲು ಪೂರೈಕೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
 ಕವಾಡಿಗರ ಹಟ್ಟಿ ಘಟನೆಗೆ ಕಾಲರಾ ಕಾರಣವಾಗಿದ್ದು ಆ ಸೂಕ್ಷ್ಮಾಣು ಸೂಳೆಕೆರೆ ನೀರಿನಲ್ಲಿ ಪತ್ತೆಯಾಗಿಲ್ಲ. ಇದರಿಂದ ಅಡಕೆ ನಾಡು ಚನ್ನಗಿರಿಯ ಜನರು ನಿಟ್ಟುಸಿರು ಬಿಡುವಂತಾಗಿದೆ.
 ಕಳೆದ ವಾರ ಕೆರೆಯ 5 ಜಾಕ್‌ವೆಲ್‌ಗಳಿಂದ 6 ನೀರಿನ ಮಾದರಿಗಳನ್ನು ಪರೀಕ್ಷಿಸಿದಾಗ ಆ ನೀರಿನಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸೂಕ್ಷ್ಮಾಣುಗಳಿರುವುದು ಪತ್ತೆಯಾಯಿತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣ ಮತ್ತು ತಾಲೂಕಿನ ಹಳ್ಳಿಗಳಿಗೆ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡಲಾಯಿತು.
 ದಾವಣಗೆರೆಯಲ್ಲಿರುವ ಜಿಲ್ಲಾ ಜನಾರೋಗ್ಯ ಪ್ರಯೋಗಾಲಯದಲ್ಲಿ ಹೈಡ್ರೋಜನ್ ಸಲ್‌ಫೈಡ್ ಮೀಡಿಯಾ ಟೆಸ್ಟ್ ಕೈಗೊಂಡಾಗ ಸೂಳೆಕೆರೆ ನೀರಿನ 4 ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ ಎಂದು ತಿಳಿದು ಬಂದಿತ್ತು.
 ನೀರಿನಲ್ಲಿ ಇರಬಹುದಾದ ಸೂಕ್ಷ್ಮಾಣುಗಳ ಪರೀಕ್ಷೆಗಾಗಿ ಆ ಮಾದರಿಗಳನ್ನು ಶಿವಮೊಗ್ಗದ ಜಿಲ್ಲಾ ಜನಾರೋಗ್ಯ ಪ್ರಯೋಗಾಲಯಕ್ಕೆ ಕಳಿಸಿ ಕೊಡಲಾಯಿತು. ಅಲ್ಲಿ ಎಂ.ಪಿ.ಎನ್. (ಮೋಸ್ಟ್ ಪ್ರೊಬ್ಯಾಬಲ್ ನಂಬರ್) ಟೆಸ್ಟ್‌ಗೆ ಕಳಿಸಿದಾಗ ನೀರಿನಲ್ಲಿ ಸೂಕ್ಷ್ಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದು ದೃಢಪಟ್ಟಿತು. ನಂತರ ಕಲ್ಚರ್ ಪರೀಕ್ಷೆಗಾಗಿ ಶಿವಮೊಗ್ಗದ ಮೆಡಿಕಲ್ ಕಾಲೇಜಿಗೆ ಕಳಿಸಲಾಗಿತ್ತು. ಅಲ್ಲಿಂದ ಈಗ ವರದಿ ಬಂದಿದೆ.

 (ಕೋಟ್)
 ಸೂಳೆಕೆರೆಯ ಒಂದು ಜಾಕ್‌ವೆಲ್‌ನ ನೀರಿನಲ್ಲಿ ಸೂಕ್ಷ್ಮಾಣುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕ್ಲೋರಿನೇಷನ್‌ಗೆ ಕ್ರಮ ತೆಗೆದುಕೊಳ್ಳಲಾಗುವುದು. ಅದಲ್ಲದೇ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಲ್ಲಾದರೂ ಬೂದು ನೀರು ಅಥವಾ ಚರಂಡಿ ನೀರು ಮಿಶ್ರಣ ಆಗುತ್ತಿದೆಯೆ ಎಂಬುದನ್ನು ತಿಳಿಯಲು ಇಲಾಖೆಯ ಸಿಬ್ಬಂದಿ ಸರ್ವೇ ನಡೆಸುತ್ತಿದ್ದಾರೆ. ಡ್ರೋಣ್ ಮೂಲಕವೂ ಸರ್ವೇ ಮಾಡುವಂತೆ ಸೂಚನೆ ನೀಡಲಾಗಿದೆ. ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ ಸರಿಪಡಿಸಲಾಗುವುದು.
  ಸುರೇಶ ಇಟ್ನಾಳ್, ಜಿ.ಪಂ. ಸಿಇಒ
 ಚಿತ್ರ: ಡಿವಿಜಿ ಸುರೇಶ ಇಟ್ನಾಳ್ 16
 (ಮಗ್‌ಶಾಟ್)
 ...
 (ಸೂಳೆಕೆರೆಯ ಚಿತ್ರ ಬಳಸಬಹುದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net