

ಸೂಲಿಬೆಲೆ
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ಬಳಿ ಇರುವ ಅಂಗಡಿ ಮಳಿಗೆಗಳು ಪ್ರತಿ ಬಾರಿ ಮಳೆ ಬಂದಾಗ ಸಂಪೂರ್ಣ ಜಲಾವೃತವಾಗಿ ಅವಾಂತರವೇ ಸೃಷ್ಟಿಯಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಶನಿವಾರ ಸುರಿದ ಮಳೆಯಿಂದ ವ್ಯಾಪಾರಿಗಳು ಪರದಾಡುವಂತಾಯಿತು.
ಹೊಸ ಬಸ್ ನಿಲ್ದಾಣದ ಬಳಿ 30ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾಗಿದೆ. ಮಳಿಗೆಗಳನ್ನು ಬಾಡಿಗೆಗೆ ಪಡೆದು ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೆ ಮಳೆ ಬಂತೆಂದರೆ ಇಲ್ಲಿ ಅನುಕೂಲಕ್ಕಿಂತ ಆನಾನುಕೂಲವೇ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಧ್ಯಾಹ್ನ ಸುರಿದ ಮಳೆಗೆ ಅಂಗಡಿ ಮಳಿಗೆಗಳು ಜಲಾವೃತವಾಗಿವೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ನೀರು ಭಾರೀ ಪ್ರಮಾಣದಲ್ಲಿ ನಿಲ್ದಾಣ ಮತ್ತು ಅಂಗಡಿ ಮುಂಗಟ್ಟುಗಳ ಬಳಿ ನಿಲ್ಲುತ್ತದೆ. ಇನ್ನು ಜೋರು ಮಳೆ ಬಂದರೆ ನಮ್ಮ ಕಷ್ಟ ಕೇಳುವವರೇ ಇಲ್ಲ. ಇದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ವ್ಯಾಪಾರ ನಡೆಸುವುದು ಕಷ್ಟ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬಾಡಿಗೆದಾರ ಆಂಜಿನಪ್ಪ ಅಲವತ್ತುಕೊಂಡರು.
ಹೊಸ ಅಂಗಡಿಗಳ ನಿರ್ಮಾಣದ ವೇಳೆ ಸುರಿದ ಜಲ್ಲಿ, ಮರಳು ತೆರವು ಮಾಡಿಲ್ಲ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಇಲ್ಲಿ ಸಂಚಾರಕ್ಕೆ ನಿತ್ಯವು ಕಿರಿಕಿರಿಯಾಗಿದೆ. ಸಮಸ್ಯೆ ಬಗ್ಗೆ ಯಾರು ಸ್ಪಂದಿಸುವುದಿಲ್ಲ ಎಂದು ಬಾಡಿಗೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆ ಬಂದಾಗ ನೀರು ನಿಂತು ಕುಂಟೆ ನಿರ್ಮಾಣವಾದರೆ, ಬಿಸಿಲಿನ ವೇಳೆ ಧೂಳಿನ ಕಿರಿಕಿರಿ ಹೆಚ್ಚಾಗಿದೆ. ಕಟ್ಟಡ ನಿರ್ಮಾಣಕ್ಕೆ ತಂದ ಜಲ್ಲಿ, ಮರಳು ತೆರವು ಮಾಡಿಲ್ಲ. ಸಮಸ್ಯೆ ಬಗೆಹರಿಸಲು ಮನವಿ ಮಾಡಿ ಬೇಸರವಾಗಿದೆ.
ಆಂಜಿನಪ್ಪ ಬಾಡಿಗೆದಾರ
ಬಾಡಿಗೆ ವಸೂಲಿಗೆ ವಹಿಸುವ ಕಾಳಜಿಯನ್ನು ಸೌಕರ್ಯ ಕಲ್ಪಿಸಲು ತೋರಬೇಕು. ಮಳೆ ಬಂದರೆ ಇಲ್ಲಿ ಕುಂಟೆಯಂತೆ ನಿರ್ಮಾಣವಾಗುತ್ತದೆ. ಈ ಸಮಸ್ಯೆಗೆ ಗ್ರಾಪಂನಿಂದ ಪರಿಹಾರ ಕಲ್ಪಿಸಬೇಕು.
ಎಂ.ಆರ್.ಉಮೇಶ್ ಸೂಲಿಬೆಲೆ