

ಕಳಸ: ಹೆಣ್ಣಿಗೆ ಹೆರಿಗೆ ಎಂಬುದು ಎರಡನೇ ಹುಟ್ಟು ಮತ್ತು ಹೊಸ ಜೀವಕ್ಕೆ ಪ್ರಾಣಕೊಡುವ ಅದ್ಭುತ ಕಾರ್ಯ. ಈ ಕಾರ್ಯದಲ್ಲಿ ಸೂಲಗಿತ್ತಿಯರ ಪಾತ್ರ ದೊಡ್ಡದು ಎಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ ಸಂಯೋಜಕಿ ಪೂರ್ಣಿಮಾ ಪ್ರಮೋದ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್‌ನಿಂದ ಕೆಪಿಎಸ್ ಬಾಲಕಿಯರ ಶಾಲೆಯಲ್ಲಿ ನಡೆದ ಜಾನಪದ ಜಗುಲಿ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯರ ಪಾತ್ರದ ಕುರಿತು ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಎಷ್ಟೇ ಆಧುನಿಕ ಸೌಲಭ್ಯಗಳು ಇದ್ದರೂ ಅನೇಕ ಹಳ್ಳಿಗಳಲ್ಲಿ ಸೂಲಗಿತ್ತಿಯರು ಆರೋಗ್ಯ ಸೇವೆಗಳಿಗೆ ಮತ್ತು ಜನ ಸಾಮಾನ್ಯರಿಗೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸೂಲಗಿತ್ತಿಯರು ಕೇವಲ ಆರೋಗ್ಯ ಕಾರ್ಯಕರ್ತೆಯಾಗಿರದೆ ಎಲ್ಲ ಸಮುದಾಯದ ವಿಶ್ವಾಸಾರ್ಹ ವ್ಯಕ್ತಿಗಳಾಗುತ್ತಿದ್ದರು. ಅವರು ತಾಯಂದಿರು ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲ ನೀಡುವುದಲ್ಲದೆ ಕುಟುಂಬದ ಸದಸ್ಯರಂತೆ ಇದ್ದು ಹೆರಿಗೆಯಂಥ ಸೂಕ್ಷ್ಮಸಮಯದಲ್ಲಿ ನೆರವಾಗುತ್ತಿದ್ದರು ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ, ಸೂಲಗಿತ್ತಿಯರಾಗಿದ್ದ ನರಸಮ್ಮ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದರು. ಅವರು ಹನ್ನೆರಡನೇ ವಯಸ್ಸಿನಲ್ಲಿ ಸೂಲಗಿತ್ತಿಯಾಗಿ ಹೆರಿಗೆ ಮಾಡಿಸಲು ಆರಂಭಿಸಿ ಹದಿನೈದು ಸಾವಿರಕ್ಕೂ ಹೆರಿಗೆ ಮಾಡಿಸಿದ ಮಹಾ ತಾಯಿಯಾಗಿದ್ದರು ಎಂದು ಹೇಳಿದರು.
ಕಜಾಪ ಅಧ್ಯಕ್ಷ ರಜಿತ್ ಕೆಳಗೂರು ಮಾತನಾಡಿ, ಜಾನಪದ ಮತ್ತು ಸೂಲಗಿತ್ತಿ ಒಂದಕ್ಕೊಂದು ಸಂಬಂಧ ಇದೆ. ಮಕ್ಕಳಿಗೆ ಸೂಲಗಿತ್ತಿಯರ ಮಹತ್ವದ ಅರಿವು ಮೂಡಿಸುವಂತ ಕಾರ್ಯಗಳು ಆಗಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಮಾಡಲಾಗುತ್ತಿದೆ. ಜಾನಪದ ಕಲೆ ಬೆಳೆಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಮಾಡುವುದರ ಜತೆ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು. ಈ ಹಿಂದೆ ಮನೆ ಮನೆಗೆ ಹೋಗಿ ಹೆರಿಗೆ ಮಾಡಿಸಿ ಕಳಸ ಆರೋಗ್ಯ ಕೇಂದ್ರ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದ ಸರೋಜಾ ಅಣ್ಣಪ್ಪ ಅವರನ್ನು ಗೌರವಿಸಲಾಯಿತು.
ಕಳಸ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಹೋಬಳಿ ಕಸಾಪ ಅಧ್ಯಕ್ಷ ಶೇಖರ ಶೆಟ್ಟಿ, ಕಳಸ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುಮನಾ ಜಯರಾಜ್, ಕೆಪಿಎಸ್ ಮುಖ್ಯಶಿಕ್ಷಕಿ ನಗ್ಮಾ ಬಾನು, ಕಲ್ಲುಬಾವಿ ಅಂಗನವಾಡಿ ಕಾರ್ಯಕರ್ತೆ ಸರೋಜಾ, ನಿಖಿತಾ ಸಂತೋಷ್, ನಗೀನಾ ಖಾದರ್, ಆಶಾ ರಾಘವೇಂದ್ರ, ಚಿಂತನ್, ಗಣೇಶ್ ಕುಕ್ಕೋಡು, ಶಮೀರ್ ಇತರರಿದ್ದರು.