ಸೂರ್ಯನಿಲ್ಲದಿದ್ದರೆ ಜೀವರಾಶಿ ಬದುಕಲು ಸಾಧ್ಯವೇ ಇಲ್ಲ

DSC_7189
Published on

ತುಮಕೂರು: ಸೂರ್ಯ ನಮ್ಮೆಲ್ಲರ ಚೈತನ್ಯಧಾಮ. ಸೂರ್ಯ ನಮಗೆ ಆರೋಗ್ಯಕಾರಕ ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂರ್ಯ ನಮಗೆಲ್ಲ ಜೀವಾಧಾರ ಹಾಗೂ ಜೀವನಾಧಾರ. ಸೂರ್ಯ ಇಲ್ಲದಿದ್ದರೆ ಯಾವ ಜೀವರಾಶಿಯೂ ಬದುಕಲು ಸಾಧ್ಯವೇ ಇಲ್ಲ ಎಂದರು. ಸೂರ್ಯನ ಉಪಸ್ಥಿತಿ ನಮ್ಮಲ್ಲಿ ಸಂಚಲನ ಉಂಟು ಮಾಡುತ್ತದೆ. ಅಂತಹ ಶಕ್ತಿ ಸೂರ್ಯ ರಶ್ಮಿ, ಸೂರ್ಯ ಕಿರಣದಲ್ಲಿದೆ. ಸೂರ್ಯ ಇರುವೆಡೆ ಆರೋಗ್ಯ ಇರುತ್ತದೆ. ಸೂರ್ಯ ಇಲ್ಲದಿದ್ದರೆ ಅಲ್ಲಿ ಅನಾರೋಗ್ಯ ಇರುತ್ತದೆ. ನಮ್ಮ ಮೈಗೆ ಸೂರ್ಯನ ರಶ್ಮಿ ಬೀಳಬೇಕು. ಉತ್ತಮ ಗಾಳಿ ಸೇವಿಸಬೇಕು. ಇದನ್ನು ನಾವ್ಯಾರೂ ಮಾಡುತ್ತಿಲ್ಲ. ಇದರಿಂದ ನಮ್ಮ ಆರೋಗ್ಯ ಹದಗೆಡುತ್ತಿದ್ದು ಪ್ರತಿಯೊಬ್ಬರೂ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ದೀಪಾವಳಿ, ಮಕರ ಸಂಕ್ರಾಂತಿ ಹಬ್ಬಗಳಂತೆ ರಥಸಪ್ತಮಿ ಕೂಡ ಒಂದು ಹಬ್ಬ. ರಥಸಪ್ತಮಿ ಸೂರ್ಯನ ಸುತ್ತಮುತ್ತ ಜರುಗುವಂತಹ ಸೂರ್ಯ ಕೇಂದ್ರಿತ ಹಬ್ಬ. ಉತ್ತರಾಯಣಕಾಲವನ್ನು ಪುಣ್ಯ ಕಾಲ ಎಂದು ಕರೆಯುತ್ತೇವೆ. ರಥಸಪ್ತಮಿಗೆ ಪರ್ವ ಕಾಲ ಎಂದು ಕರೆಯುತ್ತೇವೆ. ಇದು ಪ್ರಥಮ ಪರ್ವ. ಇದನ್ನು ಮಾಘಸಪ್ತಮಿ ಎಂದೂ ಸಹ ಕರೆಯಲಾಗುತ್ತದೆ. ಶುಕ್ಲಪಕ್ಷ ಮಾಘಮಾಸದ 7ನೇ ದಿನ ರಥಸಪ್ತಮಿ ಹಬ್ಬ ನಡೆಯುತ್ತದೆ ಎಂದು ಹೇಳಿದರು. ಪ್ರತಿಯೊಬ್ಬರ ಬದುಕಿನಲ್ಲಿ ಯೋಗ ಸಾರ್ಥಕತೆ ತಂದುಕೊಡುತ್ತದೆ. ಜತೆಗೆ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು. ಇಡೀ ವಿಶ್ವಕ್ಕೆ ಯೋಗವನ್ನು ಪಸರಿಸಿದ ಕೀರ್ತಿ ಪತಂಜಲಿ ಯೋಗ ಶಿಕ್ಷಣ ಸಮಿತಿಗೆ ಸಲ್ಲುತ್ತದೆ. ಪ್ರತಿಯೊಬ್ಬ ತಮ್ಮ ಕುಟುಂಬದ ಜತೆಗೆ ನೆರೆಹೊರೆಯವರಿಗೂ ಯೋಗದ ಮಹತ್ವ ತಿಳಿಸುವ ಕೆಲಸ ಮಾಡಬೇಕು ಎಂದರು.

ಸೂರ್ಯನನ್ನು ಯಾರೂ ಭಜಿಸುತ್ತಾರೋ ಅವರು ಸಂಕಟದಿಂದ ಪಾರಾಗುತ್ತಾರೆ. ಅನೇಕ ಯೋಗಿಗಳು, ಮಹಾತ್ಮರು, ಪುಣ್ಯಪುರುಷರು ಮುಂಜಾನೆಯೇ ಎದ್ದು ಸೂರ್ಯೋದಯದೊಂದಿಗೆ ತಮ್ಮ ದೈನಂದಿನ ಕೆಲಸ ಕಾರ್ಯ ಆರಂಭಿಸುತ್ತಿದ್ದರು. ಆದರೆ, ಸೂರ್ಯೋಲ್ಲಂಘನ ಮಾಡಿದ ಅಪಕೀರ್ತಿ ಮನುಷ್ಯನಿಗೆ ಸಲ್ಲುತ್ತದೆ. ಪ್ರಾಣಿ, ಪಕ್ಷಿಗಳು ಸೂರ್ಯೋದಯದೊಂದಿಗೆ ತಮ್ಮ ಕೆಲಸ ಕಾರ್ಯ ಆರಂಭಿಸುತ್ತವೆ, ಸೂರ್ಯಾಸ್ತಮದೊಂದಿಗೆ ತಮ್ಮ ಕೆಲಸ ಕಾರ್ಯ ಮುಗಿಸುತ್ತವೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತ ಸಂಚಾಲಕ ತ್ಯಾಗರಾಜು ಹೇಳಿದರು.

ಸಾಮೂಹಿಕ ಸೂರ್ಯ ನಮಸ್ಕಾರ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ಯೋಗಪಟುಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು.

ಸೂರ್ಯನಿಗೆ ರಥ ಬದಲಾಯಿಸುವುದು, ಪಥ ಬದಲಾಯಿಸುವುದಷ್ಟೇ ಗೊತ್ತು, ಪಕ್ಷ ಬದಲಾಯಿಸುವ ಕೆಲಸ ಗೊತ್ತಿಲ್ಲ. ರಥಸಪ್ತಮಿಯನ್ನು ಸೂರ್ಯನ ಜನ್ಮದಿನ, ಸೂರ್ಯ ದಿನಾಚರಣೆ ಎಂದೂ ಸಹ ಕರೆಯಬಹುದು.

ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net