

ಮೈಸೂರು: ಪಾರ್ಶ್ವ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರದ ರಸ್ತೆಯಲ್ಲಿ ವಾಹನ, ಜನಸಂಚಾರ ವಿರಳವಾಗಿತ್ತು. ದೇವಸ್ಥಾನಗಳಿಗೂ ಬೀಗ ಹಾಕಲಾಗಿತ್ತು.
ಪಾರ್ಶ್ವಸೂರ್ಯ ಗ್ರಹಣ ಸಂಭವಿಸಿದ್ದು, ನಗರದಲ್ಲಿ ಸಂಜೆ 5.13ರಿಂದ 6 ಗಂಟೆವರೆಗೆ ಸೂರ್ಯಗ್ರಹಣ ಗೋಚರವಾಯಿತು. ಈ ಹೊತ್ತಿನಲ್ಲಿ ಮೋಡದ ಮರೆಯಲ್ಲಿ ಇದು ಅಸ್ಪಷ್ಟವಾಗಿ ಕಾಣಿಸಿಕೊಂಡಿತು. ಆದರೆ, ಸಾರ್ವಜನಿಕರು ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಹಿಂದೇಟು ಹಾಕಿದರು.
ಮಧ್ಯಾಹ್ನ 3ರಿಂದ ಸುದ್ದಿವಾಹಿನಿಗಳಲ್ಲಿ ಗ್ರಹಣದ ಕುರಿತು ಸುದ್ದಿ ಬಿತ್ತರವಾಗುತ್ತಿದ್ದಂತೆ ಜನರು ಮನೆ ಸೇರಿಕೊಂಡರು. ಬೀದಿಗಳಲ್ಲಿ ಜನರ ಸುಳಿದಾಟ ಎಂದಿನಂತೆ ಇರಲಿಲ್ಲ. ಮಕ್ಕಳು ಕೂಡ ಆಟವನ್ನು ಬಿಟ್ಟು ಗೂಡು ಸೇರಿಕೊಂಡರು. ಚಹಾ ಅಂಗಡಿ, ಹೋಟೆಲ್‌ಗಳಲ್ಲೂ ಗ್ರಾಹಕರು ಇರಲಿಲ್ಲ. ಮಾರುಕಟ್ಟೆಯಲ್ಲೂ ಇದೇ ಸ್ಥಿತಿ ಇತ್ತು.
ವಿಶ್ವವಿಖ್ಯಾತ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯದಲ್ಲಿ ಮಧ್ಯಾಹ್ನದ ಬಳಿಕ ವೀಕ್ಷಕರ ಸಂಖ್ಯೆ ಇಳಿಕೆ ಆಯಿತು. ದೀಪಾವಳಿ ರಜೆ ಹಿನ್ನೆಲೆಯಲ್ಲಿ ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ಪ್ರವಾಸಿಗರ ದಟ್ಟಣೆ ಹೆಚ್ಚಿತ್ತು. ಇದೇ ಸ್ಥಿತಿ ಮಂಗಳವಾರ ಬೆಳಗ್ಗೆಯೂ ಇತ್ತು. ಆದರೆ, ಮಧ್ಯಾಹ್ನ ಬಳಿಕ ಇಲ್ಲಿಯೂ ಜನರ ಸಂಖ್ಯೆ ಇಳಿಕೆ ಆಯಿತು. ರಜೆ ದಿನಗಳಲ್ಲಿ ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಜನಜಂಗುಳಿ ಅಧಿಕವಾಗಿರುತ್ತದೆ. ಆದರೆ ಇಂದು ಅಂತಹ ಸನ್ನಿವೇಶ ಕಂಡುಬರಲಿಲ್ಲ.
ಗ್ರಹಣ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 1ರವರೆಗೆ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಯಿತು. ಬಳಿಕ ದೇಗುಲಕ್ಕೆ ಬೀಗ ಹಾಕಲಾಯಿತು.
ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ವೇಣುಗೋಪಾಲ ದೇವಸ್ಥಾನದ ಸೇರಿದಂತೆ ವಿವಿಧ ದೇಗಲಗಳಿಗೂ ಬಾಗಿಲು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಭಕ್ತರಿಗೆ ಪ್ರವೇಶ ಇರಲಿಲ್ಲ. ಸೂರ್ಯಗ್ರಹಣ ಮುಗಿದ ಬಳಿಕ ಶುದ್ಧೀಕರಣ ಮಾಡಿ ಪೂಜೆ ಸಲ್ಲಿಸಲಾಯಿತು. ಗ್ರಹಣ ಮೋಕ್ಷದ ನಂತರ ದೇವರ ದರ್ಶನಕ್ಕೆ ಮತ್ತೆ ಅವಕಾಶ ಕಲ್ಪಿಸಿಕೊಡಲಾಯಿತು.